ADVERTISEMENT

ವಿಜಯಪುರ | ವಿಧಾನಸಭೆ ಚುನಾವಣೆ: ನಾಮಪತ್ರ ಸಲ್ಲಿಕೆ ಭರಾಟೆ

ಅಭ್ಯರ್ಥಿಗಳಿಂದ ಶಕ್ತಿ ಪ್ರದರ್ಶನ; ದೇಗುಲ, ದರ್ಗಾ, ಮಹಾತ್ಮರ ಮೂರ್ತಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 15:38 IST
Last Updated 17 ಏಪ್ರಿಲ್ 2023, 15:38 IST
ಮುದ್ದೇಬಿಹಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೋಮವಾರ  ನಾಮಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರೊಂದಿಗೆ ವಿಜಯದ ಸಂಕೇತ ತೋರಿಸಿದರು
ಮುದ್ದೇಬಿಹಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೋಮವಾರ  ನಾಮಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರೊಂದಿಗೆ ವಿಜಯದ ಸಂಕೇತ ತೋರಿಸಿದರು   

ವಿಜಯಪುರ: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸೋಮವಾರ ಜಿಲ್ಲೆಯಲ್ಲಿ ವಿವಿಧ ಪಕ್ಷಗಳ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರೊಂದಿಗೆ ಡೊಳ್ಳು, ವಾದ್ಯ ವೈಭವಗಳೊಂದಿಗೆ ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ದೇವಸ್ಥಾನ, ದರ್ಗಾಗಳಿಗೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಎ.ಎಸ್‌.ಪಾಟೀಲ ನಡಹಳ್ಳಿ:

ADVERTISEMENT

ಮುದ್ದೇಬಿಹಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪುನರಾಯ್ಕೆ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಏ.19 ರಂದು ಬೃಹತ್ ಜನಸಾಗರದೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು, ಅಂದು ಬಿಜೆಪಿಯ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.

ಹಾಲುಮತ ಮೂಲ ಗುರುಪೀಠದ ಸುಕ್ಷೇತ್ರ ಸರೂರು ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ ಇಂದಿರಾ ವೃತ್ತದ ಮೂಲಕ ಮುಖ್ಯ ರಸ್ತೆ, ಬಸವೇಶ್ವರ ವೃತ್ತ ಮಾರ್ಗವಾಗಿ ಸಹಸ್ರಾರು ಅಭಿಮಾನಿ ಕಾರ್ಯಕರ್ತರ ಪಡೆಯೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಡಾ.ದೇವಾನಂದ ಚವ್ಹಾಣ:

ನಾಗಠಾಣ ಮೀಸಲು ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ಅವರು ತಮ್ಮ ಅಪಾರ ಬೆಂಬಲಿಗರು, ಪಕ್ಷದ ಕಾರ್ಯಕರ್ತರೊಂದಿಗೆ ವಿಜಯಪುರ ನಗರದಲ್ಲಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ಚವ್ಹಾಣ ಅವರು ತಮ್ಮ ಮನೆಯಲ್ಲಿ ಕುಲದೇವತೆ ಜಗನ್ಮಾತೆ ಶ್ರೀ ಅಂಬಾ ಭವಾನಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಕುಟುಂಬ ಸಮೇತರಾಗಿ ಆಗಮಿಸಿ, ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಶಾಸಕರ ಪತ್ನಿ ಡಾ.ಸುನಿತಾ ಚವ್ಹಾಣ, ಪುತ್ರ ಅಭಿನವ ಚವ್ಹಾಣ, ಮುಖಂಡರಾದ ಹಣಮಂತ ಕನ್ನಾಳ, ವಸಂತಕುಮಾರ ನಾಯಕ ಇದ್ದರು. ಏ.18ರಂದು ಬೆಳಿಗ್ಗೆ 10.30ಕ್ಕೆ ಮತ್ತೊಮ್ಮೆ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಚವ್ಹಾಣ ತಿಳಿಸಿದ್ದಾರೆ.

ಅಬ್ದುಲ್ ಹಮೀದ್ ಮುಶ್ರೀಫ್:

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಸರ್ವ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ನಾಮಪತ್ರ ಸಲ್ಲಿಸಿದರು.

ಪ್ರಮುಖರಿಂದ ನಾಮಪತ್ರ:

ಮುದ್ದೇಬಿಹಾಳ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ, ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಕೆ.ಬೆಳ್ಳುಬ್ಬಿ, ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ, ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠಲ ಕಟಕಧೋಂಡ, ದೇವರ ಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಸುಣಗಾರ, ಬಿಜೆಪಿ ಅಭ್ಯರ್ಥಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ನಾಮಪತ್ರ ಸಲ್ಲಿಸಿದರು.

ವಿಜಯಪುರ ನಗರ ಮತಕ್ಷೇತ್ರಕ್ಕೆ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಎಚ್.ಟಿ, ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಉತ್ತಮ ಪ್ರಜಾಕೀಯ ಪಾರ್ಟಿಯ ಶಂಕ್ರಪ್ಪ ಕಾಶಿನಾಥ ಅವಟಿ, ಪಕ್ಷೇತರ ಅಭ್ಯರ್ಥಿ ಲಕ್ಷ್ಮೀಬಾಯಿ ಶಿವಪ್ಪ ಗುದ್ದಿ ನಾಮಪತ್ರ ಸಲ್ಲಿಸಿದ್ದಾರೆ.

ಬಬಲೇಶ್ವರ ಮತಕ್ಷೇತ್ರದಿಂದ ಮೋತಿರಾಂ ಧರ್ಮು ಚವ್ಹಾಣ (ಪಕ್ಷೇತರ), ಡಾ.ಎಸ್.ಆರ್.ತಳೇವಾಡ (ಪಕ್ಷೇತರ), ಅಬ್ದುಲರಹಿಮಾನ ದುಂಡಸಿ (ಪಕ್ಷೇತರ), ಮಹೆಬೂಬ ಮಲಬೌಡಿ (ಪಕ್ಷೇತರ), ಸುನೀಲ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಯಾಸೀನ ಜವಳಿ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.

ನಾಗಠಾಣ ಮತಕ್ಷೇತ್ರದಿಂದ ಶಂಕರ ಚವ್ಹಾಣ (ಪಕ್ಷೇತರ), ಕಲ್ಲಪ್ಪ ತೊರವಿ (ಬಹುಜನ ಸಮಾಜ ಪಕ್ಷ), ಇಂಡಿ ಮತಕ್ಷೇತ್ರದಿಂದ ಕವಿತಾ ಎಸ್.ಕಟಕದೊಂಡ (ರಾಣಿ ಚೆನ್ನಮ್ಮ ಪಾರ್ಟಿ), ನಾಮಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.