ಆಲಮಟ್ಟಿ: ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಅವಳಿ ಜಿಲ್ಲೆಯ ನೂರಾರು ರೈತರು ಜುಲೈ 21ರಂದು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಿದ್ದಾರೆ.
ಪ್ರತಿ ವರ್ಷದ ಕಡ್ಲಿಗರ ಹುಣ್ಣಿಮೆಯಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ ಸಮೇತ ಈ ಭಾಗದ ಕೃಷಿಕರೊಂದಿಗೆ ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಯ ಉಗಮಸ್ಥಾನದಲ್ಲಿ ಉಡಿ ತುಂಬಿ, ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವುದು ಕಳೆದ 15 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯ.
ಮಹಾಬಲೇಶ್ವರಕ್ಕೆ ಬರಲು ಆಸಕ್ತಿ ಇರುವ ವಿಜಯಪುರ– ಬಾಗಲಕೋಟೆ ಜಿಲ್ಲೆಯ ರೈತರು ಜುಲೈ 20 ರಂದು ಬೆಳಿಗ್ಗೆ 11ಕ್ಕೆ ವಿಜಯಪುರ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಬಳಿ ಬರಬೇಕು. ಅಲ್ಲಿಂದ ಮಧ್ಯಾಹ್ನ 12ಕ್ಕೆ ತಿಕೋಟಾ, ಬಾಬಾನಗರ, ಬಿಜ್ಜರಗಿ, ಕನಮಡಿ, ಜತ್ತ, ಕರಾಡ, ಮೂಲಕ ಸಾತಾರ ನಗರ ತಲುಪಿ ಹಳೆಯ ಕೊಲ್ಹಾಪುರ ರಸ್ತೆಯ ಗೂಡೋಲಿ ಬಳಿಯ ಶಿವರಾಜ್ ಪೆಟ್ರೋಲ್ ಬಂಕ್ ಹತ್ತಿರದ ಅಕ್ಷತಾ ಮಂಗಲ ಭವನದಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುವುದು.
ಜುಲೈ 21 ರಂದು ಬೆಳಿಗ್ಗೆ 6ಕ್ಕೆ ಗುರುಪೂರ್ಣಿಮೆಯಂದು ಸಾತಾರಾದಿಂದ ಮಹಾಬಲೇಶ್ವರದ ಪಂಚಗಂಗಾ ಸನ್ನಿಧಿಗೆ ತೆರಳಿ ಬೆಳಿಗ್ಗೆ 10ಕ್ಕೆ ಕೃಷ್ಣಾ ನದಿಯ ಉಗಮಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದೆ. ವಿವಿಧ ಸ್ವಾಮೀಜಿಗಳು, ಸಾತಾರಾದ ಶಾಸಕ, ಸಂಸದರೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮಹಾಬಲೇಶ್ವರಕ್ಕೆ ಬರುವ ರೈತರು ಆನಂದ ಬಿಷ್ಟಗೊಂಡ ಮೊ.9845769528, ವಿಜಯ ಬಾಟಿ 6360077801 ಮತ್ತು ಸಾತಾರದಲ್ಲಿ ರಮೇಶ ಕುಂಬಾರ 9922815920 ಅವರನ್ನು ಸಂಪರ್ಕಿಸಬೇಕು ಎಂದು ಆನಂದ ಬಿಷ್ಟಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.