ADVERTISEMENT

ಉತ್ತರ ಕರ್ನಾಟಕ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ: ಬಾಬುರಾಜೇಂದ್ರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 14:22 IST
Last Updated 24 ಜೂನ್ 2024, 14:22 IST
ಡಾ.ಬಾಬುರಾಜೇಂದ್ರ ನಾಯಿಕ
ಡಾ.ಬಾಬುರಾಜೇಂದ್ರ ನಾಯಿಕ   

ವಿಜಯಪುರ: ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಯಾದಾಗಿನಿಂದ ಈವರೆಗೆ ನಿಗಮದ ಅಧ್ಯಕ್ಷ ಸ್ಥಾನ ನೇಮಕ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಬಂಜಾರಾ ಸಮಾಜದ ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ ಅಸಮಾಧಾನ ಹೊರ ಹಾಕಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತಿ ಹೆಚ್ಚು ತಾಂಡಾಗಳನ್ನು ಹೊಂದಿರುವ ವಿಜಯಪುರ ಹಾಗೂ ಕಲ್ಬುರ್ಗಿ ಜಿಲ್ಲೆಯನ್ನು ಕಡೆಗಣಿಸಿ, ಪ್ರತಿ ಬಾರಿ ಕಡಿಮೆ ತಾಂಡಾಗಳಿರುವ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕೂಡಲೇ ಈ ಭಾಗದ ನಾಯಕರಿಗೂ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯಿಸಿದರು. 

ದಶಕಗಳ ಹೋರಾಟದ ಫಲವಾಗಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲ ತಾಂಡಾಗಳು ಸೌಲಭ್ಯಗಳನ್ನು ಪಡೆದುಕೊಂಡಿವೆ. ಆದರೇ ಉತ್ತರ ಕರ್ನಾಟಕ ಭಾಗದ ತಾಂಡಾಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದರು. 

ADVERTISEMENT

ನಿಗಮ ಸ್ಥಾಪನೆಯಾದಾಗಿನಿಂದ ವಿಜಯಪುರ ಹಾಗೂ ಕಲ್ಬುರ್ಗಿ ಜಿಲ್ಲೆ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದೆ. ಈ ಜಿಲ್ಲೆಯವರು ಕಡೆ ಪಂಕ್ತಿಯ ಅತಿಥಿಗಳಂತಾಗಿದ್ದು, ತಮ್ಮ ಹಕ್ಕು ಮಂಡನೆಗೂ ಭಿಕ್ಷೆ ಬೇಡುವಂತಾಗಿದೆ. ಸರ್ಕಾರ ಜಿಲ್ಲೆಗೆ ತಾರತಮ್ಯ ಮಾಡಬಾರದು. ಈ ಭಾಗದವರಿಗೆ ನಿಗಮದ ಅಧ್ಯಕ್ಷತೆ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲೂ ಬಂಜಾರಾ ಸಮುದಾಯ ಕಾಂಗ್ರೆಸ್‌ ಪಕ್ಷಕ್ಕೆ ಒಕ್ಕೊರಲಿನಿಂದ ಬೆಂಬಲ ನೀಡಿದೆ. ಅದರ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಪಡೆದುಕೊಂಡಿದೆ. ಉತ್ತರ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾಗಿದ್ದಾರೆ. ನಿಗಮದ ಅಧ್ಯಕ್ಷತೆ ಆಯ್ಕೆಯಲ್ಲಿ ಅನ್ಯಾಯ ಮಾಡದೆ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮುಖಂಡರಾದ ಡಿ.ಎಲ್.ಚಹ್ವಾಣ, ಮಾಜಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಮುಖಂಡರಾದ ರಾಜು ಜಾಧವ ಹಾಗೂ ಕಲ್ಬುರ್ಗಿ ಜಿಲ್ಲೆಯ ಸುಭಾಸ ರಾಠೋಡ ಆಕಾಂಕ್ಷಿಗಳಾಗಿದ್ದು, ಈ ಭಾಗದವರಿಗೆ ನಿಗಮ ಅಧ್ಯಕ್ಷ ನೇಮಕ ಮಾಡಿದರೇ ಸಮಗ್ರ ಉತ್ತರ ಕರ್ನಾಟಕದ ತಾಂಡಾಗಳು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಡಿ.ಎಲ್.ಚವ್ಹಾಣ, ಸುರೇಶ ಬಿಜಾಪುರ, ಸಂಜು ಜಾಧವ ಇದ್ದರು.

ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷರ ನೇಮಕದಲ್ಲಿ ವಿಜಯಪುರ ಜಿಲ್ಲೆಯನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ವಿಜಯಪುರ 568 ತಾಂಡಾಗಳನ್ನು ಹೊಂದಿದ್ದರೂ ಈವರೆಗೆ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯ ನೀಡದಿರುವುದು ಖಂಡನೀಯ 
–ರಾಜು ಜಾಧವ ಜಿಲ್ಲಾಧ್ಯಕ್ಷ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.