ADVERTISEMENT

‘ಆಮ್ಲಜನಕ ಉತ್ಪಾದನೆಗೆ ಬಿದಿರು ಕೃಷಿ’–ಪಾಷಾ ಪಟೇಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 14:32 IST
Last Updated 30 ಆಗಸ್ಟ್ 2021, 14:32 IST
ಮಹಾರಾಷ್ಟ್ರ ರಾಜ್ಯ ಕೃಷಿ ಮೌಲ್ಯ ಆಯೋಗದ ಮಾಜಿ ಅಧ್ಯಕ್ಷ ಪಾಷಾ ಪಟೇಲ ಮಾತನಾಡಿದರು. ಶಾಸಕ ಸುಭಾಸ ದೇಶಮುಖ, ಕೃಷಿ ತಜ್ಞ ಸಂಜೀವ ಕರ್ಪೆ ಇದ್ದಾರೆ
ಮಹಾರಾಷ್ಟ್ರ ರಾಜ್ಯ ಕೃಷಿ ಮೌಲ್ಯ ಆಯೋಗದ ಮಾಜಿ ಅಧ್ಯಕ್ಷ ಪಾಷಾ ಪಟೇಲ ಮಾತನಾಡಿದರು. ಶಾಸಕ ಸುಭಾಸ ದೇಶಮುಖ, ಕೃಷಿ ತಜ್ಞ ಸಂಜೀವ ಕರ್ಪೆ ಇದ್ದಾರೆ   

ಸೋಲಾಪುರ: ಭವಿಷ್ಯದಲ್ಲಿ ಆಮ್ಲಜನಕದ ಉತ್ಪಾದನೆಗೆ ಬಿದಿರು ಕೃಷಿ ಅತ್ಯುತ್ತಮ ಮಾರ್ಗವೆಂದು ಮಹಾರಾಷ್ಟ್ರ ರಾಜ್ಯ ಕೃಷಿ ಮೌಲ್ಯ ಆಯೋಗದ ಮಾಜಿ ಅಧ್ಯಕ್ಷ ಪಾಷಾ ಪಟೇಲ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಭವಿಷ್ಯದಲ್ಲಿ ಮಾನವಕುಲ ಜೀವಂತ ಉಳಿಯಬೇಕಾದರೆ ಬಿದಿರು ಕೃಷಿಗೆ ಒತ್ತು ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಸರ ಅಸಮತೋಲನದಿಂದ ಇಂದು ಮಳೆಯ ಪ್ರಮಾಣ ಕಡಿಮೆಯಾಗಿದೆ. ಗಾಳಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಿದರು.

ADVERTISEMENT

ಬಿದಿರು ಕೃಷಿ ತಜ್ಞ ಸಂಜೀವ ಕರ್ಪೆ ಮಾತನಾಡಿ, ಬಿದಿರು ಕೃಷಿಯು ಆಕ್ಸಿಜನ್ ಉತ್ಪಾದನೆಗೆ ಉಪಯುಕ್ತವಾಗಿದೆವಿಶ್ವದ ವಿವಿಧ 28 ದೇಶಗಳು ಸಾಬೀತುಪಡಿಸಿವೆ ಎಂದು ಹೇಳಿದರು.

ಇದರ ಫಲವಾಗಿ ಭೂಮಿ ಸಂರಕ್ಷಣಾ ಅಭಿಯಾನದ ಮೂಲಕ ನಾವು ಬಿದಿರನ್ನು ಬೆಳೆಸಲು ರಾಜ್ಯವ್ಯಾಪಿ ಪ್ರಯತ್ನ ಮಾಡುತ್ತಿದ್ದೇವೆ. ಇದರ ಒಂದು ಭಾಗವಾಗಿ ಬಿದಿರನ್ನು ನೆಡುವ ಅಭಿಯಾನವನ್ನು ತಾಲ್ಲೂಕಿನ ಮಂದ್ರುಪನಲ್ಲಿ ಆರಂಭಿಸಲಾಗುವುದು ಎಂದರು.

ಬಿದಿರು ಕೃಷಿಗೆ ಕೇಂದ್ರ ಸರ್ಕಾರದಿಂದ ರೈತರಿಗೆ ಸಹಾಯಧನ ನೀಡಲಾಗುತ್ತದೆ. ಇದರ ಜೊತೆಗೆ ಬಿದಿರು ಮಾರಾಟಗಳ ಒಪ್ಪಂದಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಉತ್ಪಾದನೆ ಮಾಡುವುದು ಮತ್ತು ಮಾರಾಟ ಮಾಡುವ ಸಲುವಾಗಿ ರೈತರಿಗೆ ಮಾರ್ಗದರ್ಶನ ನೀಡಲಾಗುವುದು ಎಂದರು.

ಶಾಸಕ ಸುಭಾಸ ದೇಶಮುಖ ಮಾತನಾಡಿ, ಕೋವಿಡ್‌ನ ಎರಡನೆಯ ಅಲೆಯಲ್ಲಿ ದೇಶದ ಶೇ 1ರಷ್ಟು ಜನರಿಗೆ ಮಾತ್ರ ಆಮ್ಲಜನಕದ ಅವಶ್ಯಕತೆ ಇತ್ತು. ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಯಿತು. ಭವಿಷ್ಯದಲ್ಲಿ ಇನ್ನಷ್ಟು ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.