ಕೊಲ್ಹಾರ: ‘ಬಂಜಾರ ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ವಲಸೆ ಹೋಗುವ ಪ್ರವೃತ್ತಿ ಬಿಡಬೇಕು. ಹಾಗೂ ಸಮಾಜದ ಜಾಗೃತಿಗಾಗಿ ದುಡಿಯಬೇಕು’ ಎಂದು ಗಾಯಕ ಆರ್.ಬಿ.ನಾಯಕ ಹೇಳಿದರು.
ತಾಲ್ಲೂಕಿನ ಹಳೆರೋಳ್ಳಿ ತಾಂಡಾ ನಂ.2 ರಲ್ಲಿ ಮಂಗಳವಾರ ಬೆಂಗಳೂರಿನ ಭಾರತೀಯ ಬಂಜಾರ ಸಂಘಟನಾ ಸಮಿತಿ ನೇತೃತ್ವದಲ್ಲಿ ಬಂಜಾರ ಸಾಮಾಜಿಕ ಚಿಂತನೆ ಹಾಗೂ ಸಾಂಸ್ಕೃತಿಕ ಕಲಾ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಸೋಮಲಿಂಗ ಸ್ವಾಮೀಜಿ ಶಂಕರಲಿಂಗ ಗುರುಪೀಠ ಕೆಸರಹಟ್ಟಿ ಮಾತನಾಡಿ ಬಂಜಾರ ಸಮಾಜದ ಯುವಕರು ಕೆಟ್ಟ ಚಟಗಳಿಗೆ ದಾಸರಾಗದೆ ಸಮಾಜ ಒಳಿತಿಗಾಗಿ ಒಂದಾಗಿ ಅಭಿವೃದ್ಧಿಗಾಗಿ ಶ್ರಮಿಸೋಣ. ಸಮಾಜಕ್ಕೆ ಸಂಕಷ್ಟ ಬಂದಾಗ ಒಟ್ಟಾಗಿ ಹೋರಾಟ ಮಾಡೋಣ ಎಂದರು.
ರಾಜ್ಯಾಧ್ಯಕ್ಷ ಪುಂಡಲೀಕ ಪವಾರ ಮಾತನಾಡಿ, ಬಂಜಾರ ಸಮಾಜ ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ಭಾರತೀಯ ಬಂಜಾರ ಸಂಘಟನಾ ಸಮಿತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಕೊಡಿಸುವ ಕೆಲಸ ಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಮಾಂತೇಶ ಪವಾರ, ದಾರಾಸಿಂಗ್ ನಾಯಕ, ರಾಜು ಪವಾರ, ರವಿ ಪವಾರ, ಆರ್ ಡಿ ಪವಾರ, ಶ್ರೀಶೈಲ ಲಮಾಣಿ, ಪ್ರೇಮ ಸಿಂಗ್ ಪವಾರ, ರಮೇಶ ಜಾದವ್,ಕುಭುಸಿಂಗ್ ಪವಾರ, ಶಾರದಾ ಅರ್ಜುನ ಲಮಾಣಿ ಹಾಗೂ ವಿವಿಧ ಜಾನಪದ ಕಲಾ ತಂಡಗಳು ಕಲಾವಿದರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.