ADVERTISEMENT

ವಿಜಯಪುರ: ಹುಡುಕಿ ಕೊಡಿ ‘ಬಾರಾ ಸೌ’ ಬಾವಡಿ!

ಬಸವರಾಜ ಸಂಪಳ್ಳಿ
Published 4 ಮಾರ್ಚ್ 2024, 5:37 IST
Last Updated 4 ಮಾರ್ಚ್ 2024, 5:37 IST
ವಿಜಯಪುರದ ಐತಿಹಾಸಿಕ ಚಾಂದ್‌ ಬಾವಡಿ –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರದ ಐತಿಹಾಸಿಕ ಚಾಂದ್‌ ಬಾವಡಿ –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ   

ವಿಜಯಪುರ: ಆದಿಲ್‌ಶಾಹಿಗಳ ಕಾಲದಲ್ಲಿ ‘ಬಾವಡಿಗಳ ನಾಡು’ ಎಂದೇ ಗುರುತಿಸಿಕೊಂಡಿದ್ದ ಐತಿಹಾಸಿಕ ಬಿಜಾಪುರ ನಗರದಲ್ಲಿ ‘ಬಾರಾ ಸೌ’ ಬಾವಡಿಗಳಿದ್ದವೆಂಬುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ.

ಹೌದು, ಒಂದಾನೊಂದು ಕಾಲದಲ್ಲಿ ವಿಜಯಪುರ ನಗರದ ಗಲ್ಲಿ ಗಲ್ಲಿಯಲ್ಲೂ ಜನರು ಕುಡಿಯುವ ನೀರಿಗೆ ಆಶ್ರಯಿಸಿದ್ದು ಬಾವಡಿ (ಬಾವಿ)ಗಳನ್ನು ಎಂದರೆ ಸದ್ಯದ ಸ್ಥಿತಿಯಲ್ಲಿ ನಂಬಲು ಅಸಾಧ್ಯ. ಆದರೂ ನಂಬಲೇ ಬೇಕಾದಷ್ಟು ಉದಾಹರಣೆಗಳು ಈಗಲೂ ವಿಜಯಪುರ ನಗರವನ್ನು ಅಡ್ಡಾಡಿದರೆ ಕಾಣಸಿಗುತ್ತವೆ. ಇಂದು ಕೆಲವೇ ಬಾವಿಗಳು ನೋಡಲು ಮಾತ್ರ ಸಿಗುತ್ತವೆ. ಅದರಲ್ಲಿ ಕೆಲವು ಬಾವಿಗಳಲ್ಲಿ ಬೇಸಿಗೆಯಲ್ಲೂ ನೀರು ತುಂಬಿರುತ್ತವೆ. ಇನ್ನೂ ಕೆಲವು ಬಾವಿಗಳು ಇದ್ದರೂ ಪತ್ತೆ ಹಚ್ಚದಂತಹ ಪರಿಸ್ಥಿತಿಯಲ್ಲಿ ಶಿಥಿಲವಾಗಿ ಹೋಗಿವೆ. ಬಹುತೇಕ ಬಾವಿಗಳು ನಾಪತ್ತೆಯಾಗಿವೆ.

‘ವಿಜಯಪುರ ನಗರದಲ್ಲಿ ಇಂದಿಗೂ ಕೂಡ ಸುಮಾರು 200 ದೊಡ್ಡ, ಸಣ್ಣ ಬಾವಿಗಳು (ಬಾವಡಿ) ಕಾಣಲು ಸಿಗುತ್ತವೆ. ಅವುಗಳಲ್ಲಿ 20ಕ್ಕಿಂತ ಅಧಿಕ ಬಾವಿಗಳ ನೀರನ್ನು ಜನರು ಉಪಯೋಗಿಸುತ್ತಿದ್ದಾರೆ. ಅವುಗಳ ವಾಸ್ತು ರಚನೆ ಒಂದಕ್ಕಿಂತ ಒಂದು ಭಿನ್ನ’ ಎನ್ನುತ್ತಾರೆ ಇತಿಹಾಸತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ.

ADVERTISEMENT

ವಿಜಯಪುರದ ಬಾವಡಿಗಳಲ್ಲೇ ಅತ್ಯಂತ ಸುಂದರ ವಾಸ್ತುಶಿಲ್ಪದೊಂದಿಗೆ ನಿರ್ಮಾಣವಾಗಿರುವ ಬೃಹದಾಕಾರದ ಬಾವಡಿಗಳೆಂದರೆ ತಾಜ್‌ ಬಾವಡಿ ಮತ್ತು ಚಾಂದ್‌ ಬಾವಡಿ. ಈ ಎರಡು ಬಾವಿಗಳಿಗೆ ಇಂದಿಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಇನ್ನುಳಿದ ಪ್ರಮುಖ ಬಾವಡಿಗಳಾದ ಅಲಿಖಾನ್‌ ಬಾವಡಿ, ಇಬ್ರಾಹಿಂಪುರ ಬಾವಡಿ, ಇಲಾಲ ಬಾವಡಿ, ಅಂಧೇರಿ ಬಾವಡಿ, ಗುಮ್ಮಟ ಬಾವಡಿ, ಥಾಲ ಬಾವಡಿ, ದೌಲತ್‌ ಬಾವಡಿ, ನಗರ್‌ ಬಾವಡಿ, ನವಾನ್‌ ಬಾವಡಿ, ನಾಲಬಂದ್‌ ಬಾವಡಿ, ನೀಮ್‌ ಬಾವಡಿ, ಬಸ್ತಿ ಬಾವಡಿ, ಮಸ್ಜಿದ್‌ ಬಾವಡಿ, ಮಾಲ್‌ ಬಾವಡಿ, ವಲಸ್‌ ಬಾವಡಿ, ಮುಕ್ರಿ ಬಾವಡಿ, ಮುಬಾರಕ್‌ಖಾನ್‌ ಬಾವಡಿ, ಹಾಸಿಂಪೀರ ದರ್ಗಾ ಬಾವಡಿ, ಸೋನಾರ ಬಾವಡಿಗಳು ಇಂದು ತಮ್ಮ ಇರುವಿಕೆಯನ್ನೇ ಕಳೆದುಕೊಂಡಿವೆ. 

ಪ್ರಭಾವಿಗಳಿಂದ ಒತ್ತುವರಿಯಾಗಿ, ನಿವೇಶನಗಳಾಗಿವೆ. ಇನ್ನು ಕೆಲವು ಖಾಸಗಿ ಸ್ವತ್ತುಗಳಾಗಿವೆ. ಇನ್ನು ಕೆಲವು ತ್ಯಾಜ್ಯದಿಂದ ತುಂಬಿಕೊಂಡು ಉಪಯೋಗಕ್ಕೆ ಬಾರದಂತಾಗಿವೆ.

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ವಿಜಯಪುರದ ಐತಿಹಾಸಿಕ ಸ್ಮಾರಕಗಳನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಆದರೆ, ಬಾವಡಿಗಳನ್ನು ಹೊರಗಿಟ್ಟಿದೆ. ಬಾವಿಗಳ ಸಂರಕ್ಷಣೆಗೆ ಆದ್ಯತೆ ನೀಡಿಲ್ಲ. ಜಿಲ್ಲಾಡಳಿತದ ವಶದಲ್ಲಿ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ’ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ಬೇಸರ ವ್ಯಕ್ತಪಡಿಸುತ್ತಾರೆ.

‘ಐತಿಹಾಸಿಕ ಬಾವಡಿಗಳನ್ನು ಸರ್ಕಾರ, ಜನಪ್ರತಿನಿಧಿಗಳು ಗುರುತಿಸಿ ಪುನಶ್ಚೇತನಗೊಳಿಸಿ, ಸಂರಕ್ಷಿಸಲು ಆದ್ಯತೆ ನೀಡಬೇಕು’ ಎಂಬುದು ಕರ್ನಾಟಕ ಜಲ ಬಿರಾದರಿ ಸಂಸ್ಥೆಯ ಪ್ರಮುಖರಾದ ಪೀಟರ್ ಅಲೆಕ್ಸಾಂಡರ್ ಅವರ ಆಗ್ರಹ.

‘ಐತಿಹಾಸಿಕ ಬಾವಡಿಗಳನ್ನು ಸ್ವಚ್ಛಗೊಳಿಸಿ ಆ ನೀರನ್ನು ಸಾರ್ವಜನಿಕ ಶೌಚಾಲಯಗಳಿಗೆ, ಗಾರ್ಡನ್‌ಗಳಿಗೆ ಹಾಗೂ ಇನ್ನೀತರ ಬಳಕೆಗೆ ಉಪಯೋಗಿಸಿಕೊಳ್ಳಲು ಸಹಾಯಕಾರಿಯಾಗುತ್ತದೆ. ಆ ಮೂಲಕ ಬೇಸಿಗೆಯಲ್ಲಿ ನೀರಿನ ಅಭಾವವನ್ನು ತಗ್ಗಿಸಬಹುದು’ ಎಂಬುದು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಆಶಯ.

‘ಐತಿಹಾಸಿಕ ಬಾವಡಿಗಳನ್ನು ಪತ್ತೆ ಹಚ್ಚಿ ಪುನರುಜ್ಜೀವನ ಮಾಡಲು ಸರ್ಕಾರ ಪಣತೊಡಬೇಕಿದೆ. ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು’ ಎನ್ನುತ್ತಾರೆ ಪೀಟರ್ ಅಲೆಕ್ಸಾಂಡರ್.

ತಾಜ್‌ ಬಾವಡಿ ಪುನಶ್ಚೇತನ

ನಾಲ್ಕು ಶತಮಾನಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ತ್ಯಾಜ್ಯದ ಗುಂಡಿಯಂತಾಗಿದ್ದ ಐತಿಹಾಸಿಕ ತಾಜ್‌ ಬಾವಡಿ 2016ರಲ್ಲಿ ಪುನಶ್ಚೇತನಗೊಂಡಿದ್ದು ಸದ್ಯ ಜೀವಜಲದಿಂದ ತುಂಬಿ ನಳನಳಿಸುತ್ತಿದೆ. ಆದರೆ ಈ ನೀರು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ.ಪಾಟೀಲರು ವಿಶೇಷ ಆಸಕ್ತಿ ವಹಿಸಿ 2016–17ರಲ್ಲಿ ಕೆಬಿಜಿಎನ್‌ಎಲ್‌ ಮೂಲಕವಾಗಿ ಅನುದಾನ ಒದಗಿಸಿ ತಾಜ್‌ ಬಾವಡಿ ಸೇರಿದಂತೆ ಒಟ್ಟು 26 ಬಾವಡಿಗಳ ಹೂಳು ತೆಗೆಸಿ ಪುನಶ್ಚೇತನಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಬಳಿಕ ಈ ಯೋಜನೆ ನನೆಗುದಿಗೆ ಬಿದ್ದಿದೆ. ‘ಬಾವಡಿಗಳ ಪುನರುಜ್ಜೀವನ ಯೋಜನೆ’ ಮತ್ತೆ ಜಾರಿಯಾಗಬೇಕಿದೆ.

ತಾಜ್‌ ಬಾವಡಿ ದತ್ತು

ನಗರದ ಐತಿಹಾಸಿಕ ತಾಜ್‌ ಬಾವಡಿಯನ್ನು ‘ಸ್ಮಾರಕ ದತ್ತು ಯೋಜನೆ’ಯಡಿ ಮುಂಬೈನ ವರ್ಲ್ಡ್‌ ಮಾನ್ಯುಮೆಂಟ್‌ ಫಂಡ್ ಇಂಡಿಯಾ ಅಸೋಸಿಯೇಶನ್‌ ಸಂಸ್ಥೆಯು ದತ್ತು ಪಡೆದಿದೆ. ಈ ಸ್ಮಾರಕದ ಸಂರಕ್ಷಣೆ ಮತ್ತು ಪ್ರವಾಸಿಗಳಿಗೆ ಮೂಲ ಸೌಕರ್ಯ ಸೌಂದರೀಕರಣಗೊಳಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ವಿವಿಧ ಯೋಜನೆಗಳನ್ನು ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (ಸಿಆರ್‌ಆರ್‌) ನಿಧಿಯಡಿ ಹಮ್ಮಿಕೊಳ್ಳಲಿದೆ. ‘ತಾಜ್‌ ಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸಂರಕ್ಷಿಸಲು ಸ್ಮಾರಕ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಿದೆ’ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ತಿಳಿಸಿದ್ದಾರೆ. 

ಬಾವಿಗಳ ಸ್ವಚ್ಛತಾ ಅಭಿಯಾನ

ಬಾವಡಿಗಳ ಸಂರಕ್ಷಣೆಗಾಗಿ ಕರ್ನಾಟಕ ಜಲ ಬಿರಾದರಿ ಸಂಸ್ಥೆ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಆರ್ಕಿಟೆಕ್ಟ್ಸ್ ಸಹಯೋಗದಲ್ಲಿ ಐತಿಹಾಸಿಕ ಬಾವಿಗಳ ಸ್ವಚ್ಛತಾ ಅಭಿಯಾನ ಆರಂಭವಾಗಿದೆ. ಬಿ.ಎಲ್‍.ಡಿ.ಇ. ಸಂಸ್ಥೆಯ ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಎದುರಿನ ಪ್ರದೇಶದಲ್ಲಿ ಇರುವ ಚಾಬುಕ್ ಸವಾರ ದರ್ಗಾ ಹತ್ತಿರವಿರುವ ಐತಿಹಾಸಿಕ ಬಾವಿ ಸ್ವಚ್ಚಗೊಳಿಸಲಾಗುತ್ತಿದೆ. 350 ವರ್ಷಗಳಷ್ಟು ಹಳೆಯದಾದ ಈ ಬಾವಡಿಯಲ್ಲಿ ತುಂಬಿಕೊಂಡಿರುವ ಮರಗಿಡಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಇದೇ ರೀತಿ ಇನ್ನುಳಿದ ಬಾವಡಿಗಳ ಪುನಶ್ಚೇತನವಾಗಬೇಕಿದೆ.

ವಿಜಯಪುರ ನಗರದ ಕುಡಿಯುವ ನೀರಿನ ಕೊರತೆ ನೀಗಲು ಹೊಸದಾಗಿ ಬಾವಿ ಬೋರ್‌ವೆಲ್‌ ತೋಡುವ ಅಗತ್ಯ ಇಲ್ಲ. ಈಗಲೂ ನೀರಿನ ಸೆಲೆ ಇರುವ ಐತಿಹಾಸಿಕ ಬಾವಡಿಗಳನ್ನು ಪುನಶ್ಚೇತಗೊಳಿಸಿದರೆ ಸಾಕು  
ಪೀಟರ್ ಅಲೆಕ್ಸಾಂಡರ್, ಅಧ್ಯಕ್ಷ, ಜಿಲ್ಲಾ ಘಟಕ ಕರ್ನಾಟಕ ಜಲ ಬಿರಾದರಿ ಸಂಸ್ಥೆ
ವಿಜಯಪುರದ ಯಾವುದೇ ಬಾವಡಿಯನ್ನು ಸಂರಕ್ಷಿತ ಎಂದು ಎಎಸ್‌ಐ ಪರಿಗಣಿಸಿಲ್ಲ. ಎಎಸ್‌ಐ ಜೊತೆಗೆ ಸರ್ಕಾರ ಜನಪ್ರತಿನಿಧಿಗಳು ಪುನಶ್ಚೇತನಗೊಳಿಸಲು ಮನಸ್ಸು ಮಾಡಬೇಕು
ಕೃಷ್ಣ ಕೊಲ್ಹಾರ ಕುಲಕರ್ಣಿ, ಇತಿಹಾಸತಜ್ಞ ವಿಜಯಪುರ
ವಿಜಯಪುರ ನಗರದ ಐತಿಹಾಸಿಕ ತಾಜ್‌ ಬಾವಡಿಯ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಚಾಬುಕ್ ಸವಾರ ದರ್ಗಾ ಹತ್ತಿರವಿರುವ ಐತಿಹಾಸಿಕ ಬಾವಡಿಯನ್ನು ಕರ್ನಾಟಕ ಜಲ ಬಿರಾದರಿ ಸಂಸ್ಥೆ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಆರ್ಕಿಟೆಕ್ಟ್ಸ್ ಸಹಯೋಗದಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ -ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.