ADVERTISEMENT

ಬಸನಗೌಡ ಪಾಟೀಲ ಯತ್ನಾಳ ರಾಜಕಾರಣಕ್ಕೆ ಅಪವಾದ: ಎಚ್. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 13:38 IST
Last Updated 17 ಡಿಸೆಂಬರ್ 2023, 13:38 IST
<div class="paragraphs"><p>ಎಚ್. ವಿಶ್ವನಾಥ್‌</p></div>

ಎಚ್. ವಿಶ್ವನಾಥ್‌

   

ವಿಜಯಪುರ: ತಮ್ಮದೇ ಪಕ್ಷದ ನಾಯಕರ ವಿರುದ್ಧ ಮನಬಂದಂತೆ ಮಾತನಾಡುವ ವಿಜಯಪುರ ಜಿಲ್ಲೆಯ ಹಿರಿಯ ರಾಜಕಾರಣಿ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಹುಚ್ಚ. ಅವರು ರಾಜಕಾರಣಕ್ಕೆ ಅಪವಾದ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯತ್ನಾಳರ ವಿರುದ್ದ ವಾಗ್ದಾಳಿ ನಡೆಸಿದ ಅವರು, ತಮ್ಮದೇ ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿ ಮುರಗೇಶ ನಿರಾಣಿ ಅವರಿಗೆ ನಾಯಿ, ಹಂದಿ ಎನ್ನುವ ನಡೆ ಸರಿಯಲ್ಲ. ತನ್ನದೇ ಜಾತಿಯ, ತನ್ನದೇ ಪಕ್ಷದ ಮುಖಂಡರಿಗೆ ಹಂದಿ, ನಾಯಿ ಎನ್ನುವುದನ್ನು ನೋಡಿದರೆ, ಯತ್ನಾಳಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದ ವಿಶ್ವನಾಥ, ಅಯೋಗ್ಯತನಕ್ಕೆ ಒಂದು ಮಿತಿ ಬೇಕು ಎಂದರು.

ಯತ್ನಾಳ ತಮ್ಮ ಮಾತಿನ ಶೈಲಿಯ ಮೂಲಕ ಇಂದಿನ ರಾಜಕಾರಣವನ್ನು ಅವಮಾನ ಮಾಡುತ್ತಿದ್ದಾರೆ. ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು? ಹಿರಿಯ ನಾಯಕನಿಂದ ಇಂಥ ಕೀಳುಮಟ್ಟದ ಮಾತುಗಳು ಸರಿಯಲ್ಲ ಎಂದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೇ ತಪ್ಪೇನಿಲ್ಲ. ಅವರನ್ನು ಈಗಾಗಲೇ ಮೈಸೂರು ಹುಲಿ ಎಂದು ಕರೆಯಲಾಗುತ್ತದೆ. ಆದರೆ ಟಿಪ್ಪು ಹೆಸರನ್ನು ಶೌಚಾಲಯಗಳಿಗೆ ಇಡಿ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗಲೇ ಅವರ ಮಗ ಬಿ.ವೈ. ವಿಜಯೇಂದ್ರ ಅವರು ತಮ್ಮ ತಂದೆಯನ್ನು ಜೈಲಿಗೆ ಕಳುಹಿಸಿದ್ದರು. ಈತ ಒಬ್ಬ ಪೆದ್ದ, ಲಂಚಕೋರ. ಇಂಥವನು ಈ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷನನ್ನು ಮಾಡಿದ್ದು ಸರಿಯಲ್ಲ ಎಂದರು.

ನಾನು ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದೇನೆ. ಟಿಕೆಟ್ ಕೊಟ್ಟರೆ ಲೋಕಸಭೆಗೆ ಸ್ಪರ್ಧಿಸುತ್ತೇನೆ. ಕೊಡಲಿಲ್ಲ ಎಂದರೂ ನಮ್ಮ ಕೆಲಸ ಮಾಡುತ್ತ ಸುಮ್ಮನಿರುತ್ತೇನೆ ಎಂದರು.

ಉತ್ತರ ಕರ್ನಾಟಕದ 14 ಜಿಲ್ಲೆಗಳ ಪಾರುಪತ್ಯದ ಮೇಲೆ ವಿಧಾಸಭೆಯಲ್ಲಿ ದೊಡ್ಡ ಚರ್ಚೆ ನಡೆಯಬೇಕಿದೆ. ಆದರೆ ಕಾಗದದ ಮೇಲೆ ಅಭಿವೃದ್ಧಿ ನಡೆದಿದೆ. ವಾಸ್ತವದಲ್ಲಿ ಈ ಜಿಲ್ಲೆಗಳು ಏನೇನೂ ಅಭಿವೃದ್ಧಿಯಾಗಿಲ್ಲ. ಇದನ್ನೇ ಅಧ್ಯಯನ ಮಾಡಲು ಪ್ರವಾಸ ಹಮ್ಮಿಕೊಳ್ಳುವುದು ಎಂದರು.

ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ರವಿ ಕಿತ್ತೂರ, ಮೋಹನ ದಳವಾಯಿ, ಮನು ಭಾವಿಕಟ್ಟಿ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.