ADVERTISEMENT

ಮೂರ್ತಿಗಾಗಿ ಕಾಯುತ್ತಿರುವ ಬಸವೇಶ್ವರ ವೃತ್ತ

ಮಹಾಂತೇಶ ನೂಲಿನವರ
Published 16 ಮಾರ್ಚ್ 2019, 20:00 IST
Last Updated 16 ಮಾರ್ಚ್ 2019, 20:00 IST
ನಾಲತವಾಡದಲ್ಲಿರುವ ಬಸವೇಶ್ವರರ ವೃತ್ತ
ನಾಲತವಾಡದಲ್ಲಿರುವ ಬಸವೇಶ್ವರರ ವೃತ್ತ   

ನಾಲತವಾಡ:ಬಸವಾಭಿಮಾನಿ ಡಾ.ಬಿ.ಜಿ.ಗಲಗಲಿ ನೇತೃತ್ವದಲ್ಲಿ ಎರಡು ದಶಕದ ಹಿಂದೆಯೇ ಪಟ್ಟಣದ ಹೃದಯ ಭಾಗದಲ್ಲಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಛಲ ತೊಟ್ಟವರು ಯುವಕರಾದ ಜಗದೀಶ ಜಾಲಹಳ್ಳಿ, ರಾಜಶೇಖರ ಜಾವೂರ, ಶರಣಪ್ಪ ಮುಂದಲಮನಿ, ಗಂಗಣ್ಣ ಕಂದಗಲ್ಲ, ಪಾಂಡು ಕಾರ್ನರ್‌ ಹೋಟೆಲ್‌ ಮಾಲೀಕ. ಇವರಿಗೆ ಸಾಥ್‌ ನೀಡಿದವರು ಸ್ಥಳೀಯ ವ್ಯಾಪಾರಿಗಳು.

ಬಸ್‌ ನಿಲ್ದಾಣದಿಂದ ಬರುವ ರಸ್ತೆ, ಗೌಡ್ರ ಓಣಿ ಕೂಡು ರಸ್ತೆ, ಗಣಪತಿ ಚೌಕ್‌ ಸೇರಿಸುವ ರಸ್ತೆ ಮಧ್ಯದಲ್ಲೇ ಬಸವೇಶ್ವರ ವೃತ್ತ ನಿರ್ಮಾಣದ ಸಂಕಲ್ಪ ತೊಡಲಾಯಿತು.

ವೃತ್ತ ನಿರ್ಮಾಣದ ಹೊಣೆ ಹೊತ್ತಿದ್ದ ಶರಣಪ್ಪ ಡೇರೇದರ ನಿಧನದಿಂದ ಕೆಲ ಕಾಲ ನನೆಗುದಿಗೆ ಬಿದ್ದಿತು. ಉತ್ಸಾಹಿ ಯುವ ಸಮೂಹದ ತಂಡದೊಂಡಿಗೆ ಡಾ.ಗಲಗಲಿ ಪೂರ್ಣಗೊಳಿಸುವ ಸಾರಥ್ಯ ವಹಿಸಿದರು.

ADVERTISEMENT

1998ರಲ್ಲಿ ವೀರೇಶ್ವರ ಶರಣರ ಪುಣ್ಯಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ, ಶರಣ ದರ್ಶನ ಪ್ರವಚಕ್ಕೆಂದು ಪಟ್ಟಣಕ್ಕೆ ಬಂದಿದ್ದ ಬೆಳಗಾವಿ ಜಿಲ್ಲೆಯ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವೃತ್ತ ನಿರ್ಮಾಣಗಾರರಿಗೆ ಪ್ರೇರಣೆ ನೀಡಿದರು.

ಪಟ್ಟಣದ ಹೃದಯ ಭಾಗದಲ್ಲೇ ವೃತ್ತ ನಿರ್ಮಾಣಗೊಂಡಿತು. ಈ ವೃತ್ತದಲ್ಲಿ ಬಸವ ಜಯಂತಿಯಂದು ಬಸವೇಶ್ವರರ ಭಾವಚಿತ್ರ ಅಳವಡಿಸಿ, ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬಸವೇಶ್ವರರ ಫೋಟೋವನ್ನು ಮುಂದಿನ ಬಸವ ಜಯಂತಿಯಂದು ಬದಲಾಗಿಸಲಾಗುತ್ತಿದೆ.

ಬಸವ ಜಯಂತಿಯಂದು ವೃತ್ತದಲ್ಲಿನ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ವೃಷ್ಟಿಗೈಯಲಾಗುತ್ತಿದೆ. ನೆರೆದ ಭಕ್ತ ಸಮೂಹಕ್ಕೆ ಪ್ರಸಾದ ವಿತರಿಸುವ ಪದ್ಧತಿಯಿದೆ. ಇದಕ್ಕೆ ಬಸವ ಕೇಂದ್ರದವರೂ ಸಾಥ್‌ ನೀಡುವುದು ವಿಶೇಷ.

ಈ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪಂಚಲೋಹದ ಮೂರ್ತಿ ಸ್ಥಾಪಿಸುವ ಬಯಕೆ ಪಟ್ಟಣದ ಹಿರಿಯರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.