ADVERTISEMENT

ಕೋರವಾರದ ಬಸವೇಶ್ವರ ವೃತ್ತ

ಅಮರನಾಥ ಹಿರೇಮಠ
Published 30 ಮಾರ್ಚ್ 2019, 20:00 IST
Last Updated 30 ಮಾರ್ಚ್ 2019, 20:00 IST
ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದ ಹಂದಿಗನೂರ-ಕೊಂಡಗೂಳಿ ಕೂಡು ರಸ್ತೆಯಲ್ಲಿರುವ ಬಸವೇಶ್ವರ ವೃತ್ತ
ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದ ಹಂದಿಗನೂರ-ಕೊಂಡಗೂಳಿ ಕೂಡು ರಸ್ತೆಯಲ್ಲಿರುವ ಬಸವೇಶ್ವರ ವೃತ್ತ   

ದೇವರಹಿಪ್ಪರಗಿ:ಜಗಜ್ಯೋತಿ ಬಸವೇಶ್ವರರ ಹೆಸರಿನ ವೃತ್ತ ಜಿಲ್ಲೆಯ ಬಹುತೇಕ ಗ್ರಾಮ, ಪಟ್ಟಣ, ನಗರಗಳಲ್ಲಿ ಸಾಮಾನ್ಯವಾಗಿದ್ದು; ಇದಕ್ಕೆ ತಾಲ್ಲೂಕಿನ ಕೋರವಾರ ಗ್ರಾಮವು ಹೊರತಾಗಿಲ್ಲ.

ಗ್ರಾಮದ ಹಂದಿಗನೂರ-ಕೊಂಡಗೂಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಈ ವೃತ್ತ ನಿರ್ಮಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

2005-2006ನೇ ಸಾಲಿನಲ್ಲಿ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಯುವಕರೆಲ್ಲರೂ ಸೇರಿ, ವೃತ್ತ ನಿರ್ಮಾಣಕ್ಕೆ ಮುಂದಾದರು. ಬಹುತೇಕ ಕಡೆಗಳಲ್ಲಿ ವೃತ್ತ ನಿರ್ಮಿಸಿದ, ಕೆಲ ವರ್ಷಗಳ ನಂತರ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಇಲ್ಲಿ ಮಾತ್ರ ವಿಶೇಷ.

ADVERTISEMENT

ವೃತ್ತ ನಿರ್ಮಾಣಕ್ಕೂ ಮುನ್ನವೇ ಬಸವೇಶ್ವರರ ಪ್ರತಿಮೆಯನ್ನು ನಾಲ್ಕು ವರ್ಷ ಮುಂಚಿತವಾಗಿ ಸ್ಥಳೀಯ ವೈದ್ಯರಾದ ಸೋಮಶೇಖರ ಹಿರೇಮಠ ತಮ್ಮ ಸ್ವಂತ ಖರ್ಚಿನಲ್ಲಿ ಸಿದ್ಧಗೊಳಿಸಿ, ಗ್ರಾಮದ ಮಠದಲ್ಲಿ ತಂದಿಟ್ಟಿದ್ದರು. ನಂತರ ಈ ಪ್ರತಿಮೆಯನ್ನು ವೃತ್ತದಲ್ಲಿ ಬಸವ ಜಯಂತಿಯಂದು ಕನ್ನೊಳ್ಳಿಯ ಮರುಳಾರಾಧ್ಯ ಸ್ವಾಮೀಜಿಯವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ, ಪ್ರತಿಷ್ಠಾಪಿಸಲಾಯಿತು ಎಂದು ಗ್ರಾಮದ ಹಿರಿಯ ನಂದಗೌಡ ಬಾಪುಗೌಡ ವೃತ್ತದ ವೃತ್ತಾಂತವನ್ನು ‘ಪ್ರಜಾವಾಣಿ’ಗೆ ತಿಳಿಸಿದರು.

ಬಸವೇಶ್ವರ ಮೂರ್ತಿ, ವೃತ್ತದ ಕಟ್ಟಡಕ್ಕೆ ಹಿರೇಮಠ ವೈದ್ಯರು ₹ 10,000 ನೀಡಿದ್ದರೆ, ವೃತ್ತದ ಸುತ್ತಲಿನ ಗ್ರಿಲ್‌ ವಿನ್ಯಾಸ, ಬಣ್ಣ, ಪ್ಲಾಸ್ಟರ್‌ಗಾಗಿ ಗ್ರಾಮಸ್ಥರೆಲ್ಲರೂ ಸೇರಿ, ₹ 1.50 ಲಕ್ಷ ಸೇರಿಸಿದ್ದರು. ಆದರೆ ಈಗ ಮೂರ್ತಿ ಭಗ್ನವಾಗಿದ್ದು, ಅದನ್ನು ಕೂಡಲ ಸಂಗಮದಲ್ಲಿ ವಿಸರ್ಜಿಸಲಾಗಿದೆ.

ಪ್ರತಿಮೆಯ ಜಾಗದಲ್ಲಿ ಭಾವಚಿತ್ರವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಪುನಃ ಪ್ರತಿಮೆಯ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದ್ದು, ಗ್ರಾಮದ ಯುವಕರೆಲ್ಲರೂ ಸೇರಿ, ₹ 25,000 ಹಣ ಸೇರಿಸಿದ್ದು, ಮುಂದಿನ ದಿನಗಳಲ್ಲಿ ಬಸವಣ್ಣನವರ ಕುಳಿತ ಭಂಗಿಯ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ಗ್ರಾಮದ ಯುವ ಧುರೀಣರಾದ ಶೇಖರಗೌಡ ಪಾಟೀಲ, ಭೀಮನಗೌಡ ಸಿದರಡ್ಡಿ, ಸಂಗಮೇಶ ಛಾಯಾಗೋಳ, ಸೋಮಶೇಖರ ಹಿರೇಮಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.