ADVERTISEMENT

ತಾಂಬಾ | ಎಲ್ಲಿ ನೋಡಿದರೂ ಮಲಿನ ನೀರು..

ಸಮಸ್ಯೆಗಳಿಂದ ನರುಳುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ

Shwetha Kumari
Published 24 ಜುಲೈ 2024, 5:42 IST
Last Updated 24 ಜುಲೈ 2024, 5:42 IST
<div class="paragraphs"><p><strong>ತಾಂಬಾ ಗ್ರಾಮದ ಕಿತ್ತುರಾಣಿ ಚೆನಮ್ಮ ಕಾಲನಿಯ ಮುಖ್ಯರಸ್ತೆ ಮೇಲೆ ನೀರು ನಿಂತು ಸಂಪೂರ್ಣ ಹದಗೆಟ್ಟಿದೆ.</strong></p></div>

ತಾಂಬಾ ಗ್ರಾಮದ ಕಿತ್ತುರಾಣಿ ಚೆನಮ್ಮ ಕಾಲನಿಯ ಮುಖ್ಯರಸ್ತೆ ಮೇಲೆ ನೀರು ನಿಂತು ಸಂಪೂರ್ಣ ಹದಗೆಟ್ಟಿದೆ.

   

ತಾಂಬಾ: ಶಿಥಿಲಗೊಂಡ ಶಾಲಾ ಕಟ್ಟಡ, 108 ಅಂಬುಲೆನ್ಸ್‌ ಸೌಲಭ್ಯ ಸಿಗದ ಆರೋಗ್ಯ ಕೇಂದ್ರ. ಎಲ್ಲಿ ನೋಡಿದರೂ ಮಲೀನ ನೀರು ಗ್ರಾಮದಲ್ಲಿ ಹರಿಯುತ್ತಿದ್ದು, ತಾಂಬಾ ಗ್ರಾಮ ಸಮಸ್ಯೆಗಳಿಂದ ತುಂಬಿ ತುಳುಕುತ್ತಿದೆ.

ಹೌದು, ತಾಂಬಾ ಗ್ರಾಮ ಮೂಲಸೌಲಭ್ಯ ವಂಚಿತವಾಗಿದ್ದು, ಗ್ರಾಮ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಈ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಇದ್ದರೂ ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ.

ADVERTISEMENT

ಶಿರಾಡೋಣ–ಲಿಂಗಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಂಬಾ ಗ್ರಾಮದ ಸುತ್ತಮುತ್ತ ಆಗಾಗ ರಸ್ತೆ ಅಪಘಾತಗಳಿಗೆ ಕಡಿವಾಣವಿಲ್ಲ. ಗರ್ಭಿಣಿಯರು ತುರ್ತು ಹೆರಿಗೆ ಚಿಕಿತ್ಸೆಗಾಗಿ ದೂರದ ವಿಜಯಪುರ ಮತ್ತು ಸೋಲಾಪುರಕ್ಕೆ ತೆರಳಬೇಕಿದೆ. 

ತಾಂಬಾ, ಗಂಗನಳ್ಳಿ, ಹಿಟ್ನಳ್ಳಿ ತಾಂಡಾ, ಬಂಥನಾಳ, ಗೂಗಿಹಾಳ, ಸುರಗಿಹಳ್ಳಿ, ವಾಡೆ, ಚಿಕ್ಕರೂಗಿ, ಕೆಂಗನಾಳ, ಬನಹಟ್ಟಿ, ಶಿವಪೂರ, ಗೊರನಾಳ, ಬೆನಕನಹಳ್ಳಿ, ಶಿರಕನಹಳ್ಳಿ, ಹೊನ್ನಳ್ಳಿ, ಹಿರೇಮಸಳಿ, ಸಂಗೋಗಿ ಗ್ರಾಮಸ್ಥರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರೆ ಹಲವಾರು ಬಾರಿ 108 ಅಂಬುಲೆನ್ಸ್‌ ಸಿಗದೇ ಪರದಾಡಿದ್ದಾರೆ.

ಆರು ಹಾಸಿಗೆಯ ತಾಂಬಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ಸಮಸ್ಯೆಗಳಿಂದ ನರುಳುತ್ತಿದೆ. ಆರೋಗ್ಯ ಕೇಂದ್ರದ ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಬರುವ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಮಾತ್ರ ಒದಗಿಸಲು ಸಾಧ್ಯವಾಗುತ್ತದೆ. ತೀವ್ರ ನಿಗಾ ಘಟಕ ಇಲ್ಲದಿರುವುದರಿಂದ, ಹೆಚ್ಚಿನ ಚಿಕಿತ್ಸೆ ಬೇಕಾದರೆ ದೂರದ ವಿಜಯಪುರ ಮತ್ತು ಸೋಲಾಪುರಕ್ಕೆ ಹೋಗುವಂತಾಗಿದೆ. ಇದರಿಂದ ಮಹಿಳೆಯರು ಹೆರಿಗೆ ಬೇನೆ ಕಾಣುವ ಮುನ್ನವೇ ಆಸ್ಪತ್ರೆಗಳಿಗೆ ಹೋಗಿ ದಾಖಲಾಗುತ್ತಿದ್ದಾರೆ.

ಗ್ರಾಮದ ತುರ್ತು ಸೇವೆಗೆ ಸದಾ ಸಿದ್ಧವಾಗಿ ಬರುತ್ತಿದ್ದ ಗ್ರಾಮದ ಆರೋಗ್ಯ ಕೇಂದ್ರದ 108 ತುರ್ತು ಸೇವಾ ವಾಹನ ಕಳೆದ ತಿಂಗಳದಿಂದ ಬೇರೆ ಗ್ರಾಮದ ಪ್ರಾಥಮಿಕ ಆರೋಗ್ಯಕ್ಕೆ ವರ್ಗಾಯಿಸಿದ್ದಾರೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಸಕರ ಮಾದರಿ ಶಾಲೆ ಮಳೆಯಿಂದಾಗಿ ಚಾವಣಿ ಪದರು ಮಕ್ಕಳ ತಲೆ ಮೇಲೆ ಬೀಳುತ್ತಿದೆ. ಆ ಭಾಗದಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಮಾಡಲಾಗುತ್ತದೆ. ಯಾವಾಗ ಏನು ಆಗುತ್ತದೆಯೋ ಎಂಬ ಭಯದಲ್ಲಿ ಶಿಕ್ಷಕರು ಮತ್ತು ಮಕ್ಕಳಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೂ ನಿತ್ಯವೂ ಆತಂಕ ಮನೆ ಮಾಡಿದೆ.

ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮನೆಯಲ್ಲಿ ಎಲ್ಲದಕ್ಕೂ ಬಳಸುವ ನೀರು ರಸ್ತೆಗೆ ಬಂದು ಸೇರುತ್ತಿದೆ. ಇದರಿಂದ ದುರ್ವಾಸನೆ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಾಂಬಾ ಸರ್ಕಾರಿ ಹೆಣ್ಣು ಮಕ್ಕಳ ಶಾಸಕರ ಮಾದರಿ ಶಾಲೆ ದುರಸ್ತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಗ್ರಾಮದ ರಸ್ತೆ ಅಭಿವೃದ್ಧಿಗೆ ₹1 ಕೋಟಿ ಬಿಡುಗಡೆ ಮಾಡಿದ್ದೇನೆ. ಶೀಘ್ರದಲ್ಲಿ ಸಿಸಿ ರಸ್ತೆ, ಕಾಮಗಾರಿಗೆ ಚಾಲನೆ ನೀಡುತ್ತೇನೆ.
ಅಶೋಕ ಮನಗೂಳಿ, ಶಾಸಕ, ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.