ADVERTISEMENT

ದಶಕದ ಸಂಭ್ರಮ; ಭಾವೈಕ್ಯದ ಸಮಾಗಮ

ಆಲಮೇಲದ ಬಸ್‌ ನಿಲ್ದಾಣದಲ್ಲಿ ಮೂರು ವೃತ್ತಗಳು

ರಮೇಶ ಎಸ್.ಕತ್ತಿ
Published 20 ಅಕ್ಟೋಬರ್ 2018, 20:00 IST
Last Updated 20 ಅಕ್ಟೋಬರ್ 2018, 20:00 IST
ಆಲಮೇಲದ ಟಿಪ್ಪು ವೃತ್ತ
ಆಲಮೇಲದ ಟಿಪ್ಪು ವೃತ್ತ   

ಆಲಮೇಲ:ಪಟ್ಟಣ ಪ್ರವೇಶಿಸುತ್ತಿದ್ದಂತೆ ಈ ಮೂರು ವೃತ್ತಗಳನ್ನು ನೋಡಲೇಬೇಕು. ಬಸ್‌ ನಿಲ್ದಾಣದ ಸನಿಹದಲ್ಲೇ ಮೂರು ದಿಕ್ಕಿಗೆ ಇವು ನಿರ್ಮಾಣಗೊಂಡಿವೆ. 2007ರ ಅಂತ್ಯದಲ್ಲಿ ಅನಾವರಣಗೊಂಡಿವೆ.

ಈ ಸಂದರ್ಭ ಪಟ್ಟಣದಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಹಿರಿಯರು, ಪೊಲೀಸರ ಮಧ್ಯಸ್ಥಿಕೆಯಿಂದ ಎಲ್ಲವೂ ಸುಸೂತ್ರವಾಗಿ ಬಗೆಹರಿಯಿತು. ಎಲ್ಲ ಸಮುದಾಯಕ್ಕೂ ನ್ಯಾಯ ದೊರೆತ ಐತಿಹಾಸಿಕ ಕ್ಷಣವು ಇದಾಯಿತು. ಇದೀಗ ದಶಕದ ಸಂಭ್ರಮ.

ಅಂಬೇಡ್ಕರ್, ಬಸವೇಶ್ವರ ಹಾಗೂ ಟಿಪ್ಪು ವೃತ್ತಗಳು 2008ರಲ್ಲಿ ಒಟ್ಟಿಗೆ ನಿರ್ಮಾಣಗೊಂಡು, ಅನಾವರಣಗೊಂಡಿದ್ದು ಒಂದು ಇತಿಹಾಸ.

ADVERTISEMENT

ಆಲಮೇಲದ ಪ್ರಮುಖ ಸ್ಥಳವೊಂದರಲ್ಲಿಯೇ ಮೂರು ಪ್ರಮುಖ ಸಮುದಾಯಗಳ ಜನರು, ತಮ್ಮ ದಾರ್ಶನಿಕರ ವೃತ್ತಗಳನ್ನು ಸ್ಥಾಪಿಸಿದ್ದು ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲು. ಅಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುರುಗನ್ ಮಧ್ಯಸ್ಥಿಕೆಯಲ್ಲಿ ಮೂರು ಸಮುದಾಯಗಳ ಪ್ರಮುಖರ ಸಭೆ ಕರೆದು, ಯಾವುದೇ ಗದ್ದಲವಾಗದಂತೆ ಎಚ್ಚರ ವಹಿಸಿ, ಮೂರು ವೃತ್ತಗಳ ರಚನೆಗೆ ಅವಕಾಶ ನೀಡಿದ ಮೇಲೆ ಅಂಬೇಡ್ಕರ್, ಬಸವೇಶ್ವರ ಮತ್ತು ಟಿಪ್ಪು ಸುಲ್ತಾನ್ ವೃತ್ತಗಳು ಜನ್ಮತಾಳಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಅಂದಿನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವರು, ಅಂಬೇಡ್ಕರ್ ವೃತ್ತ ರಚನೆಗೆ ಸೂಚಕರಾದವರು ಈಗಿನ ಬಳಗಾನೂರ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್.ಯಂಟಮಾನ. ನಿಲ್ದಾಣದ ಪಶ್ವಿಮ ದಿಕ್ಕಿನಲ್ಲಿ ತಮ್ಮ ಸಮುದಾಯದ ಎಲ್ಲರ ಸಲಹೆ ಪಡೆದು ವೃತ್ತ ರಚಿಸಿದರು.

ಬಸವೇಶ್ವರ ವೃತ್ತವನ್ನು ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ ಉತ್ತರ ದಿಕ್ಕಿನಲ್ಲಿ ಹಾಗೂ ಫರೀದಸಾಬ್‌ ಸುಂಬಡ ಪೂರ್ವ ದಿಕ್ಕಿನಲ್ಲಿ ಟಿಪ್ಪು ವೃತ್ತ ನಿರ್ಮಿಸಿದ್ದು ಇತಿಹಾಸ.

ಭಾವೈಕ್ಯತೆಯ ಸಂಗಮ:

ಈ ಮೂರು ವೃತ್ತಗಳು ಇರುವ ಜಾಗ, ಗ್ರಾಮದ ದೈವ ಪೀರಗಾಲಿಬಸಾಬ್‌ ದರ್ಗಾದ ಹತ್ತಿರದಲ್ಲಿರುವುದರಿಂದ ಸೂಫಿ ಸಂತರ ಭಾವೈಕತೆಯ ತಾಣವಾಗಿದೆ.

ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವ ಸಂದರ್ಭ ಬಸವೇಶ್ವರ, ಟಿಪ್ಪು ಮೂರ್ತಿಗೆ ಮೊದಲು ಮಾಲೆ ಹಾಕಿ ಗೌರವಿಸಲಾಗುತ್ತದೆ. ಬಸವೇಶ್ವರ ಜಯಂತಿಯಂದು ಅಂಬೇಡ್ಕರ್, ಟಿಪ್ಪು ಮೂರ್ತಿಗೆ ಹಾರ ಹಾಕಿ, ಪೂಜೆ ಸಲ್ಲಿಸುವ ಮೂಲಕ ಮುಂದಿನ ಕಾರ್ಯಕ್ರಮ ನಡೆಯಲಿದೆ. ಇದೇ ರೀತಿ ಟಿಪ್ಪು ಜಯಂತಿಯಂದು ಬಸವೇಶ್ವರ, ಅಂಬೇಡ್ಕರ್ ವೃತ್ತಕ್ಕೂ ಗೌರವ ಸಲ್ಲಿಸಲಾಗುತ್ತದೆ. ಇಲ್ಲಿ ಎಲ್ಲರೂ ಆಯಾ ವೃತ್ತದ ಹೆಸರಿಗೆ ಜೈಕಾರ, ಜಯಘೋಷ ಮಾಡಿ ಸಂಭ್ರಮಿಸುತ್ತಾರೆ. ಇದು ದಶಕದಿಂದಲೂ ನಡೆದು ಬಂದಿರುವ ಪದ್ಧತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.