ADVERTISEMENT

ಸಿಂದಗಿ |ಗೋದಾಮಿನಲ್ಲಿ ಬೆಡ್‌: ನೆಲದ ಮೇಲೆ ಮಲಗುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 13:50 IST
Last Updated 8 ಜನವರಿ 2024, 13:50 IST
ಸಿಂದಗಿ ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೋಮವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಕ್ಕಳಿಗೆ  ಬೆಡ್ ನೀಡದಿರುವ ಬಗ್ಗೆ ಶಾಲೆಯ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡರು
ಸಿಂದಗಿ ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೋಮವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಕ್ಕಳಿಗೆ  ಬೆಡ್ ನೀಡದಿರುವ ಬಗ್ಗೆ ಶಾಲೆಯ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡರು   

ಸಿಂದಗಿ: ಪಟ್ಟಣದಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 40 ಮಕ್ಕಳು ಒಂದೇ ಕೋಣೆಯಲ್ಲಿ ಮಲಗುವ ವ್ಯವಸ್ಥೆ ಇದೆ. ಮಕ್ಕಳಿಗೆ ಒದಗಿಸಬೇಕಾಗಿರುವ ಬೆಡ್‌ಗಳನ್ನು ಗೋದಾಮಿನಲ್ಲಿ ಇಡಲಾಗಿದ್ದು, ನೆಲದ ಮೇಲೆ ಮಲಗುತ್ತಿದ್ದಾರೆ. ಬಿಸಿ ನೀರು ಪೂರೈಸಿಲ್ಲ. ಕೆಲವು ಮಕ್ಕಳಿಗೆ ಗಂಟಲು ನೋವು ಇರುವುದು ಕಂಡು ಬಂದಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಸತಿ ಶಾಲೆಯಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಮಕ್ಕಳ ರಕ್ಷಣಾ ನೀತಿ ನಿಯಮಾವಳಿ ಅನುಸರಿಸಿಲ್ಲ. ಮಕ್ಕಳ ಸಮಸ್ಯೆಗಳ ಬಗ್ಗೆ ಮಕ್ಕಳ ರಕ್ಷಣಾ ನೀತಿಯನ್ವಯ ತಿಂಗಳಿಗೊಮ್ಮೆ ಸಭೆ ನಡೆಸಲು ವಸತಿ ಶಾಲೆಯ ಪ್ರಾಚಾರ್ಯರಿಗೆ ತಿಳಿಸಲಾಗಿದೆ ಎಂದರು.

‘ಅಪೌಷ್ಟಿಕತೆಯಿಂದ ಬಳಲುವ 51 ಮಕ್ಕಳಿಗೆ ಚಿಕಿತ್ಸೆ ನೀಡಲು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎನ್.ಆರ್.ಸಿ ಯುನಿಟ್ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸುತ್ತದೆ, ಬಾಣಂತಿಯರಿಗೆ ಬಿಸಿ ಆಹಾರ ಪೂರೈಕೆಯಾಗುತ್ತಿಲ್ಲ’ ಎಂದು ಹೇಳಿದರು.

ADVERTISEMENT

50 ಕಾಟ್‌ ಕೊರತೆಯಿಂದ ವಿದ್ಯಾರ್ಥಿಗಳಿಗೆ ಬೆಡ್‌ ವಿತರಿಸಿಲ್ಲ ಎಂದು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ ಹೇಳಿದರು.

ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4 ಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಗೆ ಸಂಬಂಧಿಸಿದಂತೆ ಗೊಂದಲ ಕಂಡು ಬಂದಿದೆ. ಒಟ್ಟು ದಾಖಲಾತಿಯಲ್ಲಿ 221 ಹಾಗೂ ಬಿಸಿ ಊಟದ ದಾಖಲೆಯಲ್ಲಿ 181 ಮಕ್ಕಳ ಸಂಖ್ಯೆ ತೋರಿಸಿದ್ದಾರೆ. ಆದರೆ ಶಾಲೆಯಲ್ಲಿ ಭೌತಿಕವಾಗಿ ಇದ್ದ ಮಕ್ಕಳು 132 ಮಾತ್ರ.  ಬಿಸಿಊಟಕ್ಕಾಗಿ ಬಳಕೆ ಮಾಡುವ ತೊಗರಿ ಬೇಳೆ ಕಳಪೆಯಾಗಿತ್ತು. ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಈ ಕುರಿತು ವಿವರಣೆ ಕೇಳಲಾಗಿದೆ ಎಂದು ಹೇಳಿದರು.

ವಿಜಯಪುರ ರಸ್ತೆಯಲ್ಲಿ ಬಂದಾಳ ಬಳಿ ಇರುವ ಮದರಸಾದಲ್ಲಿ 72 ಜನ ಮಕ್ಕಳು ಒಂದೇ ಚಿಕ್ಕ ಕೋಣೆಯಲ್ಲಿ ಮಲಗುವುದು ಕಳವಳಕಾರಿ  ಎಂದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಕ್ಕಳಿಗಾಗಿರುವ ಮಾಹಿತಿ, ಸಹಾಯವಾಣಿ ಪ್ರದರ್ಶಿಸಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳು ಮತ್ತು ಬಾಣಂತಿಯರಿಗೆ ಸಂಬಂಧಿಸಿದಂತೆ ಅವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜ ಜಿಗಳೂರ ಅವರೊಂದಿಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.