ADVERTISEMENT

ಪ್ರೊ.ಎಸ್.ಅಯ್ಯಪ್ಪನ್‌ಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ 

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
<div class="paragraphs"><p>ಪ್ರೊ.ಎಸ್.ಅಯ್ಯಪ್ಪನ್&nbsp;</p></div>

ಪ್ರೊ.ಎಸ್.ಅಯ್ಯಪ್ಪನ್ 

   

ಸಿಂದಗಿ (ವಿಜಯಪುರ ಜಿಲ್ಲೆ): ವಿಜಯಪುರ ಜಿಲ್ಲೆಯ ಖ್ಯಾತ ಗಣಿತ ತಜ್ಞ ಭಾಸ್ಕರಾಚಾರ್ಯ-2 ಅವರ ಸ್ಮರಣೆಗಾಗಿ ನೀಡಲಾಗುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಗೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ನಿರ್ದೇಶಕ, ಕೃಷಿ ವಿಜ್ಞಾನಿ ಪ್ರೊ.ಎಸ್. ಅಯ್ಯಪ್ಪನ್ ‌ಭಾಜನರಾಗಿದ್ದಾರೆ.

ಪಟ್ಟಣದ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ₹1 ಲಕ್ಷ ನಗದು, ರಜತ ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಈ ಹಿಂದೆ ವಿಜ್ಞಾನಿಗಳಾದ ಪ್ರೊ.ಸಿ.ಎನ್.ಆರ್ ರಾವ್, ಪ್ರೊ.ಯು.ಆರ್.ರಾವ್, ಕೃಷಿ ವಿಜ್ಞಾನಿ ಎಸ್.ಎ.ಪಾಟೀಲ, ಖಗೋಳ ವಿಜ್ಞಾನಿ ಪ್ರೊ.ಕೆ.ಕಸ್ತೂರಿರಂಗನ್‌  ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ ಅವರಿಗೆ ನೀಡಿ ಗೌರವಿಸಲಾಗಿದೆ.

ADVERTISEMENT

‘ನ.25ರಂದು ಕಾಯಕಯೋಗಿ ಚೆನ್ನವೀರ ಸ್ವಾಮೀಜಿ 131ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯರು ತಿಳಿಸಿದ್ದಾರೆ.

ಸಿ.ಶಿವಕುಮಾರಸ್ವಾಮಿ

ಸಿ.ಶಿವಕುಮಾರಸ್ವಾಮಿಗೆ ‘ಶಿವಯೋಗಿ ಶಿವಾಚಾರ್ಯ’ ಪ್ರಶಸ್ತಿ

ಸಿಂದಗಿ (ವಿಜಯಪುರ): ವೀರಶೈವ ಧರ್ಮಗ್ರಂಥ ‘ಸಿದ್ಧಾಂತ ಶಿಖಾಮಣಿ’ಯ ಕರ್ತೃ ಇಂಡಿ ತಾಲ್ಲೂಕಿನ ಸಾಲೋಟಗಿಯ ಶಿವಯೋಗಿ ಶಿವಾಚಾರ್ಯರ ಸ್ಮರಣಾರ್ಥ ನೀಡುವ ‘ಶಿವಯೋಗಿ ಶಿವಾಚಾರ್ಯ’ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಸಿ.ಶಿವಕುಮಾರಸ್ವಾಮಿ ಭಾಜನರಾಗಿದ್ದಾರೆ. ಅವರು ಸಿದ್ಧಾಂತ ಶಿಖಾಮಣಿ ಕುರಿತು 10 ಗ್ರಂಥಗಳನ್ನು ರಚಿಸಿದ್ದಾರೆ. 32 ಸಂಶೋಧನಾ ಲೇಖನ  ಪ್ರಕಟಿಸಿದ್ದಾರೆ.

10 ವಿಚಾರ ಸಂಕಿರಣ 32 ಉಪನ್ಯಾಸ ಮಾಲಿಕೆಗಳಲ್ಲಿ ಸಿದ್ಧಾಂತ ಶಿಖಾಮಣಿ ಕುರಿತು ಪ್ರಬಂಧ ಮಂಡಿಸಿದ್ದಾರೆ. ಪಟ್ಟಣದ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಲಿಂಗೈಕ್ಯ ಚೆನ್ನಯ್ಯ ಸ್ವಾಮೀಜಿ ಮತ್ತು ಲಿಂಗೈಕ್ಯ ಶಾರದಾದೇವಿ ಜನಕಲ್ಯಾಣ ಫೌಂಡೇಶನ್ ನೀಡುವ 2024ನೆಯ ಸಾಲಿನ ಪ್ರಶಸ್ತಿ ₹ 1 ಲಕ್ಷ ನಗದು ಪ್ರಶಸ್ತಿಪತ್ರ ಒಳಗೊಂಡಿದೆ. ‘ನ. 27ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.