ADVERTISEMENT

ಮಾರ್ಚ್‌ 9ರಂದು ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ: ಕಾರಜೋಳ

ವಿಜಯಪುರ, ಬಾಗಲಕೋಟೆ ನೀರಾವರಿ ಯೋಜನೆಗೆ ₹10 ಸಾವಿರ ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 13:14 IST
Last Updated 6 ಮಾರ್ಚ್ 2023, 13:14 IST
ಹೊರ್ತಿಯಲ್ಲಿ ಮಾರ್ಚ್‌ 9ರಂದು ನಡೆಯಲಿರುವ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅಡಿಗಲ್ಲು ಕಾರ್ಯಕ್ರಮದ ಸಿದ್ಧತೆಯನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಮುಖಂಡರಾದ ಅಣ್ಣಪ್ಪ ಸಾಹುಕಾರ ಖೈನೂರು, ದಾನಪ್ಪ ದುರ್ಗದ, ಆಲಮಟ್ಟಿ ಅಣೆಕಟ್ಟು ವಲಯ ಮುಖ್ಯ ಎಂಜಿನಿಯರ್ ಎಚ್.ಸುರೇಶ, ಮುಳವಾಡ ಏತ ನೀರಾವರಿ ವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಗದೀಶ ರಾಠೋಡ ಇದ್ದಾರೆ–ಪ್ರಜಾವಾಣಿ ಚಿತ್ರ
ಹೊರ್ತಿಯಲ್ಲಿ ಮಾರ್ಚ್‌ 9ರಂದು ನಡೆಯಲಿರುವ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅಡಿಗಲ್ಲು ಕಾರ್ಯಕ್ರಮದ ಸಿದ್ಧತೆಯನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಮುಖಂಡರಾದ ಅಣ್ಣಪ್ಪ ಸಾಹುಕಾರ ಖೈನೂರು, ದಾನಪ್ಪ ದುರ್ಗದ, ಆಲಮಟ್ಟಿ ಅಣೆಕಟ್ಟು ವಲಯ ಮುಖ್ಯ ಎಂಜಿನಿಯರ್ ಎಚ್.ಸುರೇಶ, ಮುಳವಾಡ ಏತ ನೀರಾವರಿ ವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಗದೀಶ ರಾಠೋಡ ಇದ್ದಾರೆ–ಪ್ರಜಾವಾಣಿ ಚಿತ್ರ   

ವಿಜಯಪುರ: ಇಂಡಿ, ನಾಗಠಾಣ, ಚಡಚಣ ಭಾಗದ ಜನರ ದಶಕಗಳ ಕಾಲದ ಬೇಡಿಕೆಯಾಗಿದ್ದ ಹೊರ್ತಿ–ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ 9ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಮೊದಲ ಹಂತಕ್ಕೆ ₹ 3 ಸಾವಿರ ಕೋಟಿ ಮೀಸಲಿಡಲಾಗಿದೆ. ಈ ಯೋಜನೆ ಅನುಷ್ಠಾನದಿಂದ ಲಕ್ಷಾಂತರ ಎಕರೆ ಒಣ ಭೂಮಿ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.

ಸಂತ್ರಸ್ತರಿಗೆ ಪರಿಹಾರ:

ADVERTISEMENT

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಬಬಲೇಶ್ವರ ತಾಲ್ಲೂಕಿನ 20 ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯಕ್ರಮವೂ ಮಾರ್ಚ್‌ 9ರಂದು ನಡೆಯಲಿದೆ ಎಂದು ತಿಳಿಸಿದರು.

ಯುಕೆಪಿ ಮೂರನೇ ಹಂತಕ್ಕೆ 1.34 ಲಕ್ಷ ಎಕರೆ ಭೂಸ್ವಾಧೀನ ಮಾಡಬೇಕಾಗಿದೆ. ಈ ಸಂತ್ರಸ್ತರಿಗೆ ಪರಿಷ್ಕೃತ ಪರಿಹಾರ ನೀಡುವುದಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದರು.

ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗೆ ನಾನು ನೀರಾವರಿ ಸಚಿವನಾದ ಬಳಿಕ ₹ 10 ಸಾವಿರ ಕೋಟಿ ಅನುದಾನವನ್ನು ಮಂಜೂರಾತಿ ನೀಡಿದ್ದೇನೆ. ಈ ವರ್ಷ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ₹ 5 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.

ಈ ಎರಡು ಮಹತ್ವಪೂರ್ಣ ಕಾರ್ಯಕ್ರಮಗಳಿಗೆ ಜಿಲ್ಲೆಯ ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ವಿಮಾನ ನಿಲ್ದಾಣ ಶೀಘ್ರ:

ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ವಿಜಯಪುರ ನೂತನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಸಿದ್ಧತೆ ಭರದಿಂದ ನಡೆದಿದೆ ಎಂದು ಹೇಳಿದರು.

ಶ್ರೇಯಸ್ಸು ಕಾರಜೋಳಗೆ: ಯತ್ನಾಳ

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ನಾನು ಮಾಡಿದ್ದು, ತಾನು ಮಾಡಿದ್ದು ಎಂದು ಕ್ರೆಡಿಟ್‌ ಪಡೆಯಲು ಜಿಲ್ಲೆಯಲ್ಲಿ ಡಿಶುಂ.. ಡಿಶುಂ..ರಾಜಕಾರಣ ಶುರುವಾಗಿದೆ. ಯಾರೂ ಮಾಡಿಲ್ಲ, ಈ ಯೋಜನೆ ಜಾರಿಗೆ ತರುತ್ತಿರುವವರು ಇಂದಿನ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಾಹೇಬರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡರು.

ನಗರದ ದರ್ಗಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶಿವಶರಣ ಮಾದಾರ ಚೆನ್ನಯ್ಯ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.