ADVERTISEMENT

ಇಂಡಿ | ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿಗೆ ಭೂಮಿಪೂಜೆ: ಸಂಸದ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 13:31 IST
Last Updated 18 ಜುಲೈ 2024, 13:31 IST
ಇಂಡಿ ಪಟ್ಟಣದಲ್ಲಿ ನಡೆದ ಸಂಸದರಿಗೆ ಸನ್ಮಾನ ಮತ್ತು ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಸಂಸದ ಜಿಗಜಿಣಗಿ ಮಾತನಾಡಿದರು
ಇಂಡಿ ಪಟ್ಟಣದಲ್ಲಿ ನಡೆದ ಸಂಸದರಿಗೆ ಸನ್ಮಾನ ಮತ್ತು ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಸಂಸದ ಜಿಗಜಿಣಗಿ ಮಾತನಾಡಿದರು   

ಇಂಡಿ: ತಾಲ್ಲೂಕಿನಲ್ಲಿ ಹಾಯ್ದು ಹೋಗುವ ಅಕ್ಕಲಕೋಟ ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಶೀಘ್ರವೇ ಭೂಮಿಪೂಜೆ ಮಾಡಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದಲ್ಲಿ ಸಂಸದರಿಗೆ ಸನ್ಮಾನ ಮತ್ತು ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಪೂಜೆ ಮಾಡಿದ್ದು, ಇಂಡಿ ಮತಕ್ಷೇತ್ರದ ಜನರ ಒತ್ತಾಯದ ಮೇರೆಗೆ ಭೂಮಿಪೂಜೆ ಮಾಡಲಾಗುವುದು ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವ ಭೂ ಸ್ವಾಧೀನ ಕಾರ್ಯ ಚಾಲನೆಯಲ್ಲಿದೆ. ಕೂಡ್ಲಗಿಯಲ್ಲಿ ವಿದ್ಯುತ್‌ ಅಣು ಸ್ಥಾವರ ಮಾಡದೇ ಹೋಗಿದ್ದರೆ ಕೃಷ್ಣಾ ಕಾಲುವೆಯಿಂದ ರೈತರಿಗೆ ನೀರು ಪಡೆಯಲು ತೊಂದರೆ ಆಗುತ್ತಿತ್ತು ಎಂದರು.

ಮುಡಾ ಹಗರಣ– ಸಿಬಿಐಗೆ ಒಪ್ಪಿಸಲಿ: ತಾಲ್ಲೂಕಿನಲ್ಲಿ ರಸ್ತೆಗಳು ಹದೆಗೆಟ್ಟಿವೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪ ಸಂಖ್ಯಾತರಿಗೆ ಮೀಸಲಿಟ್ಟ ಹಣ ಬಳಕೆ ಮಾಡಿಕೊಂಡಿದೆ.  ಹಗರಣಗಳ ಸುಳಿಯಲ್ಲಿ ಸಿಲುಕಿದೆ. ತಾಕತ್ತಿದ್ದರೆ ಸರ್ಕಾರ ಮುಡಾ ಹಗರಣವನ್ನು ಸಿಬಿಐಗೆ ಒಪ್ಪಿಸಲಿ ಎಂದರು.

ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳ. ಕಾರ್ಯಕರ್ತರು ಏನೆ ಕೆಲಸ ತಂದರೂ ಪ್ರಾಮಾಣಿಕತೆಯಿಂದ ಮಾಡುತ್ತ ಬಂದಿದ್ದೇನೆ ಮತ್ತು ಮಾಡುತ್ತೇನೆ ಎಂದು ತಿಳಿಸಿದರು.

ವಿ.ಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಪರಿಶಿಷ್ಟ ಸಮುದಾಯದವರಾಗಿ, ಏಳು ಬಾರಿ ಜಿಗಜಿಣಗಿಯವರು ಸಂಸದರಾಗಿರುವುದು ದಕ್ಷಿಣ ಭಾರತದಲ್ಲಿಯೇ ಮೊದಲಿಗರು. ವಿಜಯಪುರ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ತಂದಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಈ ಕ್ಷೇತ್ರ ಮುನ್ನಡೆಸುತ್ತಾರೆ ಎಂದರು.

ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಶೀಲವಂತ ಉಮರಾಣಿ, ಮಲ್ಲನಗೌಡ ಪಾಟೀಲ, ಮರೆಪ್ಪ ಗಿರಣಿವಡ್ಡರ, ದೇವೆಂದ್ರ ಕುಂಬಾರ ಮಾತನಾಡಿದರು.

ಅಣ್ಣಪ್ಪ ಖೈನೂರ, ಸಿದ್ದಲಿಂಗ ಹಂಜಗಿ,ಶಂಕರಗೌಡ ಪಾಟೀಲ,ಅಶೋಕಗೌಡ ಪಾಟೀಲ, ಶ್ರೀಕಾಂತ ದೇವರ, ಶ್ರೀಶೈಲಗೌಡ ಪಾಟೀಲ,ಎಸ್.ಎಸ್.ಮಜ್ಜಗಿ, ಚೆನ್ನುಗೌಡ ಪಾಟೀಲ, ಅಯೂಬ ನಾಟಿಕಾರ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.