ADVERTISEMENT

ವಕ್ಫ್‌: ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್‌!; ಕಾಂಗ್ರೆಸ್ ಮುಖಂಡರು

ಬಿಜೆಪಿ ದ್ವಂದ್ವ ನೀತಿಯನ್ನು ಬಹಿರಂಗಗೊಳಿಸಿದ ಕಾಂಗ್ರೆಸ್‌ ಮುಖಂಡರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:29 IST
Last Updated 29 ಅಕ್ಟೋಬರ್ 2024, 14:29 IST
ಪ್ರೊ.ರಾಜು ಆಲಗೂರ
ಪ್ರೊ.ರಾಜು ಆಲಗೂರ   

ವಿಜಯಪುರ: ವಕ್ಫ್ ಆಸ್ತಿ ವಿಷಯವಾಗಿ ಈ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲೂ ವಿಜಯಪುರ ಜಿಲ್ಲೆಯ 25ಕ್ಕೂ ಅಧಿಕ ರೈತರಿಗೆ ನೋಟಿಸ್‌ ನೀಡಲಾಗಿತ್ತು ಎಂಬ ವಿಷಯವನ್ನು ಕಾಂಗ್ರೆಸ್‌ ಮುಖಂಡರು ಬಹಿರಂಗಗೊಳಿಸಿದರು.

ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ (2022ರ ಸೆಪ್ಟೆಂಬರ್‌ 9 ರಿಂದ ನವೆಂಬರ್‌ 18) ವಿಜಯಪುರ ಜಿಲ್ಲೆಯ 25 ರೈತರಿಗೆ ವಕ್ಫ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿತ್ತು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ವಿಜಯಪುರ ಜಿಲ್ಲೆಯ ರೈತರಾದ ಆನಂದ ಚಂದ್ರಶೇಖರ ಹಡಪದ, ಅಶೋಕ ಬಣ್ಣದ, ಬಡಿಯಾಲ ಜಮನ ಲಾಹೋರಿ, ಗೋವಿಂದ ಲಿಂಗಸಾ, ಗಿರಿಮಲ್ಲಪ್ಪ ಚನ್ನಾಳ, ಎ. ಸಂಜಯಕುಮಾರ ಶಶಿಮಲ್ಲ ಜೈನ, ಮಹಾವೀರ ಶಂಕರಲಾಲ್‌ ಒಸ್ವಾಲ್‌, ರವಿ ರಾಮಣ್ಣ ಮಾದರ, ಬಸಪ್ಪ ಶಿದಪ್ಪ ಬಂಗಾರಿ, ಮಹಾಲಿಂಗಯ್ಯ ನಾಗಯ್ಯ ಹಿರೇಮಠ ಮತ್ತಿತರ ರೈತರಿಗೆ ವಕ್ಫ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿತ್ತು. ಈ ರೈತರು ಯಾವ ಸಮುದಾಯಕ್ಕೆ ಸೇರಿದವರು  ಎಂಬುದಕ್ಕೆ ಬಿಜೆಪಿ ಮುಖಂಡರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. 

ADVERTISEMENT

ಆಗ ಅಧಿಕಾರ ಅನುಭವಿಸುತ್ತಿದ್ದ ಬಿಜೆಪಿಯವರಿಗೆ ರೈತರಿಗೆ ನೋಟಿಸ್‌ ನೀಡಿ, ಅವರ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಮರಳಿ ಪಡೆದ ಸಂದರ್ಭದಲ್ಲಿ ವಿಷಯ ತಿಳಿದಿರಲಿಲ್ಲವೇ? ಅಥವಾ ವಿಷಯ ತಿಳಿದು ಸುಮ್ಮನಿದ್ದರಾ? ಅಧಿಕಾರದಲ್ಲಿಗ ಒಂದು ಕಾಯ್ದೆ? ಅಧಿಕಾರಲ್ಲಿ ಇಲ್ಲದಿದ್ದಾಗ ಇನ್ನೊಂದು ಕಾಯ್ದೆಯಾ? ಎಂದು ಪ್ರಶ್ನಿಸಿದರು.

ಬಿಜೆಪಿ ತಂಡಕ್ಕೆ ನಾಲ್ಕು ಪ್ರಶ್ನೆ:

ವಕ್ಫ್‌ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ರೈತರ ಆಹವಾಲು ಆಲಿಸಲು ಬಂದಿರುವ ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ರಾಜ್ಯ ತಂಡ ಕಾಂಗ್ರೆಸ್‌ನ ನಾಲ್ಕು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು  ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಆಗ್ರಹಿಸಿದರು.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಎಷ್ಟು ಆಸ್ತಿಯನ್ನು ರೈತರು, ಸಾರ್ವಜನಿಕರಿಂದ ವಕ್ಫ್‌ ಆಸ್ತಿ ಎಂದು ಮರಳಿ ಪಡೆದಿದ್ದೀರಿ? ಅವುಗಳನ್ನು ಮ್ಯುಟೇಶನ್ ಮಾಡಿ, ವಕ್ಫ್ ಆಸ್ತಿ ನೋಂದಣಿ ಮಾಡಿದ್ದೀರಿ? ಎಷ್ಟು ರೈತರು, ಸಾರ್ವಜನಿಕರಿಗೆ ನೋಟಿಸ್‌ ನೀಡಿದ್ದಾರೆ? ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಎಷ್ಟು ಗೆಜೆಟ್ ನೋಟಿಫಿಕೇಶನ್‍ ಹೊರಡಿಸಿದ್ದಾರೆ? ವಕ್ಫ್ ಆಸ್ತಿ ಸಂರಕ್ಷಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಬಂಧಿಸಿದ ಸಚಿವರು ಎಷ್ಟು ಸಭೆಗಳನ್ನು ನಡೆಸಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಮಲ್ಲಿಕಾರ್ಜುನ ಲೋಣಿ 
ಅಬ್ದುಲ್ ಹಮೀದ್ ಮುಶ್ರೀಫ್
ಎಂ.ಎಸ್.ಪಾಟೀಲ ಗಣಿಹಾರ
ಗಂಗಾಧರ ಸಂಬಣ್ಣಿ
ರೈತರ ಆಸ್ತಿಯನ್ನು ವಕ್ಫ್‌ಗೆ ಸರ್ಕಾರ ನೋಂದಾಣಿ ಮಾಡಿಸುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಕಾಂಗ್ರೆಸ್‌ ಟೀಕಿಸಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ 
-ಪ್ರೊ.ರಾಜು ಆಲಗೂರ ಮಾಜಿ ಶಾಸಕ 
ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ರೈತರಿಗೆ ನೀಡಿರುವ ನೋಟಿಸ್‌ ಮರೆ ಮಾಚಿ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕೋಮು ಸೌಹಾರ್ದತೆಗೆ ದಕ್ಕೆ ತರುವ ಕೆಲಸ ಬಿಜೆಪಿ ಮಾಡುತ್ತಿದೆ
-ಮಲ್ಲಿಕಾರ್ಜುನ ಲೋಣಿ ಅಧ್ಯಕ್ಷ ಕಾಂಗ್ರೆಸ್‌ ಜಿಲ್ಲಾ ಘಟಕ ವಿಜಯಪುರ
ಸರ್ಕಾರ ರೈತರ ಒಂದಿಂಚು ಜಾಗವನ್ನು ಕಸಿದುಕೊಳ್ಳುವುದಿಲ್ಲ. ಈ ಬಗ್ಗೆ ರೈತರಿಗೆ ಆತಂಕ ಬೇಡ. ಭೂಸುಧಾರಣೆ ಕಾಯ್ದೆಯಡಿ ಲಕ್ಷಾಂತರ ಎರಕೆ ಭೂಮಿಯನ್ನು ರೈತರಿಗೆ ಕೊಟ್ಟಿರುವುದು ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ 
-ಅಬ್ದುಲ್ ಹಮೀದ್‌ ಮುಶ್ರೀಫ್‌ ಕಾಂಗ್ರೆಸ್‌ ಮುಖಂಡ
ಬಿಜೆಪಿ ಮುಖಂಡರಿಗೆ ವಕ್ಫ್‌ ಅರ್ಥ ಗೊತ್ತಿಲ್ಲ. ಕಾನೂನು ಅರಿವಿಲ್ಲ. ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರಿಗೆ ಹಿಂದು–ಮುಸ್ಲಿಂ ಭಾರತ–ಪಾಕಿಸ್ತಾನ ಈ ವಿಷಯ ಬಿಟ್ಟರೆ ಅವರಿಗೆ ಬೇರೆ ಜ್ಞಾನ ಇಲ್ಲ
-ಎಸ್‌.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ 
ಹಿಜಾಬ್‌ ಹಲಾಲ್ ಉರಿಗೌಡ-ನಂಜೆಗೌಡ ಪ್ರಕರಣಗಳನ್ನು ಸೃಷ್ಠಿಸಿ ರಾಜಕೀಯವಾಗಿ ಸೋಲುಂಡ  ಬಿಜೆಪಿ ಇದೀಗ ವಕ್ಫ್ ವಿಷಯವಾಗಿ ರೈತರನ್ನು ಪ್ರಚೋದಿಸಿ ಹೋರಾಟ ಮಾಡುತ್ತಿದ್ದಾರೆ
– ಗಂಗಾಧರ ಸಂಬಣ್ಣಿ ಕಾಂಗ್ರೆಸ್‌ ಮುಖಂಡ

ನೋಟಿಸ್‌ ಸಹಜ ಪ್ರಕ್ರಿಯೆ: ಗಣಿಹಾರ ವಿಜಯಪುರ: ನೋಟಿಸ್‌ ನೀಡಿರುವುದು ಸರ್ಕಾರದ ಒಂದು ಪ್ರಕ್ರಿಯೆಯಾಗಿದೆ. ಅದು ಕಾಂಗ್ರೆಸ್‌ ಸರ್ಕಾರ ಇರಬಹುದು ಅಥವಾ ಬಿಜೆಪಿ ಜೆಡಿಎಸ್‌ ಸೇರಿದಂತೆ ಯಾವುದೇ ಸರ್ಕಾರ ಇರಬಹುದು. ಎಲ್ಲ ಸರ್ಕಾರದ ಅವಧಿಯಲ್ಲೂ ಇಂತಹ ಸಹಜ ಪ್ರಕ್ರಿಯೆಗಳು ನಡೆಯುತ್ತಿವೆ. ಇದನ್ನು ರಾಜಕೀಯಕ್ಕೆ ಬಿಜೆಪಿ ಬಳಸಿಕೊಂಡಿರುವುದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಖಂಡನೀಯ ಎಂದರು. ಪುಕ್ಕಟೆಯಾಗಿಯಾಗಲಿ ಅನೈತಿಕವಾಗಿಯಾಗಲಿ ಅಥವಾ ಕಾನೂನುಬಾಹಿರವಾಗಿಯಾಗಲಿ ಒಂದು ಇಂಚು ಭೂಮಿಯೂ ವಕ್ಪ್‌ ಆಸ್ತಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು ಎಂದು ಹೇಳಿದರು. ಕಳೆದ 50 ವರ್ಷಗಳಿಂದ ವಕ್ಫ್‌ ಮಂಡಳಿ ತನ್ನ ಆಸ್ತಿಯ ಸಂರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದೀಗ ತನ್ನ ಆಸ್ತಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಕ್ರಮಬದ್ಧಗೊಳಿಸಿಕೊಳ್ಳಲು ಮುಂದಾಗಿದೆಯೇ ಹೊರತು ರೈತರ ಆಸ್ತಿ ವಶಪಡಿಸಿಕೊಳ್ಳಲು ವಕ್ಫ್‌ ಮಂಡಳಿ ನೋಟಿಸ್‌ ಕೊಟ್ಟಿಲ್ಲ. ಇದರಿಂದ ಈಗಿರುವ ಗೊಂದಲಗಳು ಬಗೆಹರಿದು ರೈತರಿಗೂ ಅನುಕೂಲವಾಗಿದೆ ಎಂದು ತಿಳಿಸಿದರು. ನೋಟಿಸ್‌ ಬಂದಿರುವ ರೈತರು ಸರ್ಕಾರದ ಬಳಿ ಹೋಗಬೇಕೇ ವಿನಃ ಬೆಂಗಳೂರು ಸಂಸದರ ಬಳಿ ಹೋಗುವ ಅಗತ್ಯ ಏನಿತ್ತು? ಸಮಸ್ಯೆ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಇದೆ. ಆದರೆ ರಾಜಕೀಯ ಕುಮ್ಮಕ್ಕಿನಿಂದ ರೈತರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ವಕ್ಫ್‌ ಆಸ್ತಿ ಕಬಳಿಕೆ ಆಗಿರುವ ಬಗ್ಗೆ ಸಲ್ಲಿಸಿದ ವರದಿಯನ್ನು ವಿಧಾನಮಂಡಲದಲ್ಲಿ ಏಕೇ ಮಂಡಿಸಲಿಲ್ಲ ಅನುಷ್ಠಾನ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಯತ್ನಾಳ ನಡುವೆ ರಾಜಕೀಯ ಸ್ಪರ್ಧೆ ನಡೆದಿದೆ. ಈ ಕಾರಣಕ್ಕೆ ವಕ್ಫ್‌ ವಿವಾದವನ್ನು ಬಳಸಿಕೊಂಡಿದ್ದಾರೆಯೇ ಹೊರತು ಬೇರೇನೂ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.