ADVERTISEMENT

ಹೆಣಗಳ ಮೇಲೆ ಬಿಜೆಪಿ ರಾಜಕೀಯ: ಎಸ್‌.ಎಂ. ಪಾಟೀಲ ಗಣಿಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:47 IST
Last Updated 22 ಮೇ 2024, 15:47 IST
ಎಂ.ಎಸ್.ಪಾಟೀಲ ಗಣಿಹಾರ
ಎಂ.ಎಸ್.ಪಾಟೀಲ ಗಣಿಹಾರ   

ವಿಜಯಪುರ: ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ ಹೆಣಗಳ ಮೇಲೆ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ. ಪಾಟೀಲ ಗಣಿಹಾರ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನಡೆದ ಇಬ್ಬರು ಯುವತಿಯರ ಕೊಲೆ ಪ್ರಕರಣದಲ್ಲಿ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಆರೋಪಿಯಾಗಿರುವ ನೇಹಾ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ, ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸವನ್ನು ಆರ್‌ಎಸ್‌ಎಸ್‌, ಬಿಜೆಪಿ ಮಾಡಿತು. ಆದರೆ, ಅಂಜಲಿ ಕೊಲೆ ಪ್ರಕರಣದಲ್ಲಿ ಮೌನ ತಾಳಿರುವುದು ಖಂಡನೀಯ ಎಂದರು.

ಯಾರದೇ ಕೊಲೆ ನಡೆದರೂ ಅದು ಅಮಾನವೀಯ, ಇದಕ್ಕೆ ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಬೆಂಬಲ ನೀಡುವುದು ಸರಿಯಲ್ಲ. ಆದರೆ, ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ತೋರಿಸಿದ ಕಾಳಜಿಯನ್ನು ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಏಕೆ ತೋರಿಸಲಿಲ್ಲ? ಅಂಜಲಿ ಹಿಂದು ಯುವತಿಯಲ್ಲವೇ? ಎಂದು ಪ್ರಶ್ನಿಸಿದರು.

ADVERTISEMENT

ಯಾವುದೇ ಪಕ್ಷದ ಸರ್ಕಾರವಿದ್ದಾಗಲೂ ಪ್ರೇಮ ಪ್ರಕರಣ, ಕೊಲೆಗಳು ನಡೆದಿವೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಹೆಚ್ಚು ಕೊಲೆಗಳು ನಡೆದಿವೆ. ಇದೊಂದು ಕೊಲೆಗಡುಕ ಸರ್ಕಾರ ಎಂದು ಬಿಜೆಪಿ, ಸಂಘ ಪರಿವಾರದವರು ಬಿಂಬಿಸಲು ಹೊರಟಿರುವುದು ಖಂಡನೀಯ ಎಂದರು.

ಕೊಲೆಗಳಿಗೆ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪ ಸರಿಯಲ್ಲ. ಸರ್ಕಾರ ಏಕೆ ಕುಮ್ಮಕ್ಕು ಕೊಡುತ್ತದೆ ಎಂದು ಪ್ರಶ್ನಿಸಿದರು.

ಹಾವೇರಿಯಲ್ಲಿ ಈ ಹಿಂದೆ ರೈತರಿಗೆ ಗುಂಡಿಕ್ಕಿ ಕೊಲೆ ಮಾಡಿರುವುದು ಬಿಜೆಪಿ ಸರ್ಕಾರ. ಕರಾವಳಿಯಲ್ಲಿ ಪ್ರವೀಣ ನೆಟ್ಟಾರು ಕೊಲೆ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲಲ್ಲೇವೇ? ಪ್ರವೀಣ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ ಎರಡು ಜನ ಮುಸ್ಲಿಂ ಯುವಕರ ಕೊಲೆ, ಉಡುಪಿಯಲ್ಲಿ ಹಿಂದು ಯುವಕನೊಬ್ಬ ಮುಸ್ಲಿಂ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಿರುವ ಘಟನೆ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲಲ್ಲೇ ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ ನಡೆದ ಅನೇಕ ಕೊಲೆಗಳಿಗೆ ಯೋಗಿ ಆದಿತ್ಯನಾಥ ಅವರನ್ನಾಗಲಿ, ಮಣಿ‍ಪುರದಲ್ಲಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಪ್ರಧಾನಿ ಮೋದಿ ಅವರ ರಾಜೀನಾಮೆ ಏಕೆ ಕೇಳಲಿಲ್ಲ? ಬಿಜೆಪಿಯವರಿಗೆ ಕೇವಲ ರಾಜಕೀಯ ಮುಖ್ಯವಾಗಿದೆಯೇ ಹೊರತು, ಮಾನವೀಯತೆಯಲ್ಲ ಎಂದರು.

ನೇಹಾ ಕೊಲೆಯಾದಾಗ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಭೇಟಿ ನೀಡಿ ಸಾಂತ್ವಾನ ಹೇಳುವ ನೆಪದಲ್ಲಿ ರಾಷ್ಟ್ರೀಯ ಸುದ್ದಿ ಮಾಡಿದರು. ಈಗ ಅದೇ ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ನಡೆದಾಗ ನಡ್ಡಾ ಏಕೆ ಹುಬ್ಬಳ್ಳಿಗೆ ಭೇಟಿ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ನೇಹಾ, ಅಂಜಲಿ ಕೊಲೆ ಅಮಾನವೀಯ, ಅಕ್ಷಮ್ಯ. ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ತ್ವರಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊಲೆ ಪ್ರಕರಣಗಳನ್ನು ಬಿಜೆಪಿಯವರು ಹೇಗೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಜನ ಅರಿತುಕೊಳ್ಳಬೇಕು ಎಂದರು.

ಕಾಂಗ್ರೆಸ್‌ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ರವಿ ಬಿರಾದಾರ ಮಾತನಾಡಿ, ವೈಯಕ್ತಿಕ ವಿಚಾರಗಳಿಗೆ ನಡೆದ ಕೊಲೆ ಪ್ರಕರಣವನ್ನು ಒಂದು ಸಮುದಾಯದ ಮೇಲೆ ಹಾಕಿ ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ 2800 ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೂ ಆತನನ್ನು ಗಲ್ಲಿಗೇರಿಸಿ ಎಂದು ಯಾವೊಬ್ಬ ಬಿಜೆಪಿಯವರು ಏಕೆ ಒತ್ತಾಯ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ತಳವಾರ ಸಮಾಜದ ಮುಖಂಡ ಶಿವಾಜಿ ಮೆಟಗಾರ ಮಾತನಾಡಿ, ಅಂಜಲಿ ಕೊಲೆ ಪ್ರಕರಣವು ಪೊಲೀಸ್‌ ವೈಫಲ್ಯದಿಂದ ನಡೆದಿದೆ. ನೇಹಾ ಕೊಲೆ ಪ್ರಕರಣಕ್ಕೆ ಸಿಕ್ಕ ಬೆಂಬಲ ಅಂಜಲಿ ಪ್ರಕರಣಕ್ಕೆ ಸಿಕ್ಕಿಲ್ಲದಿರುವುದು ಖಂಡನೀಯ ಎಂದರು.

ಯುವತಿಯರನ್ನು ಕೊಲೆ ಮಾಡಿದವರನ್ನು ಪೊಲೀಸರು ಎನ್‌ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ನಾಗರಾಜ ಲಂಬು ಮತ್ತು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸೋಮನಾಥ ಕಳ್ಳಿಮನಿ

ಅಹಿಂದ ಮುಖಂಡರಿಗೆ ಅವಕಾಶ ನೀಡಿ’

ವಿಜಯಪುರ: ಜಿಲ್ಲೆಯಲ್ಲಿ ಅಹಿಂದ ಮುಖಂಡರಿಗೆ ರಾಜಕೀಯವಾಗಿ ಯಾವುದೇ ಹುದ್ದೆ ಸ್ಥಾನಮಾನ ಸಿಕ್ಕಿಲ್ಲ. ಇದೀಗ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಅಹಿಂದ ಮುಖಂಡರಿಗೆ ಅವಕಾಶ ಕಲ್ಪಿಸಬೇಕು ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಆಗ್ರಹಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಹಿಂದ ವರ್ಗಕ್ಕೆ ಸೇರಿದ ಯಾವೊಬ್ಬ ಮುಖಂಡರು ಜಯಗಳಿಸಿಲ್ಲ. ರಾಜಕೀಯವಾಗಿ ಅಹಿಂದ ವರ್ಗಕ್ಕೆ ಅನ್ಯಾಯವಾಗಿದೆ. ಕಾರಣ ಪರಿಷತ್‌ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಲೇ ಬೇಕು ಎಂದು ಕಾಂಗ್ರೆಸ್‌ ವರಿಷ್ಠರಿಗೆ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.