ನಾಲತವಾಡ: ‘ಆಧುನಿಕ ಜೀವನಶೈಲಿ, ಕೆಲಸದ ಒತ್ತಡ, ಆಹಾರ ಪದ್ಧತಿಗಳಿಂದಾಗಿ ಸಣ್ಣ ಮಕ್ಕಳಲ್ಲೇ ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ’ ಎಂದು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಐ.ಬಿ.ತಳ್ಳೊಳ್ಳಿ ಹೇಳಿದರು.
ವಿಶ್ವ ಮಧುಮೇಹಿ ದಿನದ ಅಂಗವಾಗಿ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊರ ಹಾಗೂ ಒಳ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.
ಜೀವನಶೈಲಿ ಬದಲಾವಣೆ ಮತ್ತು ಸೀಮಿತ ದೈಹಿಕ ಚಟುವಟಿಕೆಗಳಿಂದಾಗಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕಾಯಿಲೆಗೆ ಪುಟ್ಟ ಮಕ್ಕಳು ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ರಾಷ್ಟ್ರಮಟ್ಟದಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ. ಆನುವಂಶಿಕ ಹಾಗೂ ಪರಿಸರ ಅಂಶಗಳ ಮೇಲೆ ಮಧುಮೇಹ ಅವಲಂಬಿಸಿದ್ದು, ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಹಾಗೂ ಸಕ್ರಿಯ ಜೀವನಶೈಲಿಯೊಂದಿಗೆ ಮಕ್ಕಳ ಹಾಗೂ ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನ ಮಟ್ಟದಲ್ಲಿ ಇರಿಸಬಹುದು ಎಂದರು.
ಡಾ.ಸಿ.ಬಿ.ವಿರಕ್ತಮಠ, ‘ಸಿರಿಧಾನ್ಯ ಸೇವಿಸಬೇಕು. ಸಂಸ್ಕರಿಸಿದ ಆಹಾರ ಹಾಗೂ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ, ಅಕ್ಕಿ ಹಾಗೂ ಹಿಟ್ಟಿನ ಬ್ರೆಡ್ಗಳನ್ನು ಮಿತವಾಗಿ ಬಳಸಿದಲ್ಲಿ, ನಿಮ್ಮ ಮಧುಮೇಹ ಕಾಯಿಲೆಯನ್ನು ಸರಿದೂಗಿಸಿಕೊಂಡು ಹೋಗಬಹುದು’ ಎಂದು ಹೇಳಿದರು.
ಡಾ.ಸುಚಿತ್ರಾ, ಅರಿವಳಿಕೆ ತಜ್ಞೆ ಡಾ.ಕಾಶಿಬಾಯಿ ರಾಂಪುರ ಮಾತನಾಡಿದರು. ಹೊರ ಹಾಗೂ ಒಳ ರೋಗಿಗಳಿಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು. ನರ್ಸಿಂಗ್ ಆಫೀಸರ್ ರೇವಣಸಿದ್ಧ ಬಳವಾಟ, ಡಿಇಒ ರಾಜೇಶ್ವರಿ ಮೇತ್ರಿ, ಆಪ್ತಸಮಾಲೋಚಕರಾದ ಶಶಿಕಾಂತ ಕುಂಬಾರ, ಮಲ್ಲನಗೌಡ ದ್ಯಾಪುರ, ಟೆಕ್ನಿಷಿಯನ್ ಈರಣ್ಣ ಕಸಭೆಗೌಡ್ರ, ನರ್ಸಿಂಗ್ ಆಫೀಸರ್ ಮಹಾದೇವಿ ಲೋನಿ, ಅಮರೇಶ ಹೋಳಿ, ಶಶಿಕಾಂತ ಕುಂಬಾರ ಸ್ವಾಗತಿಸಿದರು ರೇವಣಸಿದ್ಧ ಬಳವಾಟ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.