ADVERTISEMENT

ಪರಿಶ್ರಮ ಇದ್ದರೆ ಕೃತಿ ರಚನೆ ಸಾಧ್ಯ: ಡಾ.ಪಾಸೋಡಿ

ಕೃತಿ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 14 ಮೇ 2019, 12:43 IST
Last Updated 14 ಮೇ 2019, 12:43 IST
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸೋಮವಾರ ಡಾ.ಹನುಮಂತಯ್ಯ ಪೂಜಾರಿ ರಚಿಸಿದ 'ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ' ಕೃತಿ ಬಿಡುಗಡೆಗೊಳಿಸಲಾಯಿತು
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸೋಮವಾರ ಡಾ.ಹನುಮಂತಯ್ಯ ಪೂಜಾರಿ ರಚಿಸಿದ 'ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ' ಕೃತಿ ಬಿಡುಗಡೆಗೊಳಿಸಲಾಯಿತು   

ವಿಜಯಪುರ: ‘ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ, ನಿರಂತರ ಓದಿನ ಪರಿಶ್ರಮದಿಂದ ಮಾತ್ರ ಅದು ಸಾಧ್ಯ’ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ ರಚಿಸಿದ 'ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ' ಕೃತಿ ಬಿಡುಗಡೆ ಅವರು ಮಾತನಾಡಿದರು.

‘ದೈಹಿಕ ಶಿಕ್ಷಣ ಕ್ಷೇತ್ರದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಜ್ಞಾನವನ್ನು ಮಕ್ಕಳಿಗೆ ನೀಡಲು ಹೆಚ್ಚು ಹೆಚ್ಚು ಕೃತಿಗಳ ಅಗತ್ಯವಿದೆ. ದೈಹಿಕ ಶಿಕ್ಷಣ ಕುರಿತ ಕನ್ನಡ ಮಾಧ್ಯಮ ಪುಸ್ತಕಗಳು ಕಡಿಮೆ ಇರುವ ಈ ಸಂದರ್ಭದಲ್ಲಿ ‘ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ’ ಕೃತಿಯು ಹೊರ ಬಂದಿರುವುದು ಔಚಿತ್ಯಪೂರ್ಣ ಎಂದ ಅವರು, ಹೊರ ಜಗತ್ತಿನ ಬುದ್ಧಿವಂತರು ಅಕ್ಷರ ಜಗತ್ತಿನ ಮಿತಿಯನ್ನು ತಮ್ಮ ಜಗತ್ತಿಗೆ ಹೋಲಿಕೆ ಮಾಡಬಾರದು. ಅಕ್ಷರ ಜಗತ್ತಿನಿಂದ ಬಂದವರು ವಿಜ್ಞಾನಿಗಳಾಗುತ್ತಾರೆ. ಸಮಾಜದ ದೊಡ್ಡ ಜ್ಞಾನವು ಪುಸ್ತಕಗಳಲ್ಲಿರುತ್ತದೆ’ ಎಂದರು.

ADVERTISEMENT

ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ‘ಮೊದಲು ಅಕ್ಷರಗಳನ್ನು ಜೋಡಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು, ಆಗ ಒಂದು ವಾಕ್ಯವನ್ನು ರಚಿಸಲು ಸಾಧ್ಯವಾಗುತ್ತದೆ. ಸವಲತ್ತುಗಳು ಸಿಕ್ಕಾಗ ಅನುಭವಿಸಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಬಳಸಿಕೊಳ್ಳದಿದ್ದರೆ ಮೂರ್ಖರಾಗುತ್ತೇವೆ. ಬದುಕನ್ನು ಕಟ್ಟಿಕೊಡುವುದು ನಮ್ಮ ಕಾಯಕ. ಆದ್ದರಿಂದ ನಾವು ನಿರಂತರ ಕಾಯಕದಲ್ಲಿ ತೊಡಗಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿದರು. ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಧಮ್ಮಜ್ಯೋತಿ ಪ್ರಕಾಶ, ಶಿಕ್ಷಣ ನಿಖಾಯದ ಡೀನ್ ಪ್ರೊ.ಬಿ.ಎಲ್.ಲಕ್ಕಣ್ಣವರ ಇದ್ದರು.

ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಶಿಂಧೆ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಬಡಿಗೇರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.