ವಿಜಯಪುರ: ಜಿಲ್ಲೆಯಲ್ಲಿ ಕೊಳವೆಬಾವಿ ದುರಂತ ಸಂಭವಿಸುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಇದೇ ರೀತಿ ಎರಡು ಪ್ರಕರಣಗಳು ಘಟಿಸಿದ್ದ ಕಹಿ ಅನುಭವಗಳು ಜಿಲ್ಲೆಯ ಜನರ ಸ್ಮೃತಿಪಟಲದಲ್ಲಿವೆ.
ಈ ಮೊದಲು 2008ರಲ್ಲಿ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಕಾಂಚನಾ ಎಂಬ ಬಾಲಕಿ ಮತ್ತು 2014ರಲ್ಲಿ ನಾಗಠಾಣ ಸಮೀಪದ ದ್ಯಾಬೇರಿ ಗ್ರಾಮದಲ್ಲಿ, ಯಾದಗಿರಿ ಜಿಲ್ಲೆಯಿಂದ ಕೂಲಿಗೆ ಬಂದಿದ್ದ ಹನುಮಂತ ಪಾಟೀಲ ಎಂಬುವವರ ಮೂರು ವರ್ಷದ ಹೆಣ್ಣು ಮಗು ಅಕ್ಷತಾ ಕೊಳವೆಬಾವಿಗೆ ಆಕಸ್ಮಿಕವಾಗಿ ಬಿದಿದ್ದರು.
ಅಂದು ಸಹ ಮಕ್ಕಳ ರಕ್ಷಣೆಗೆ ವಾರಾನುಗಟ್ಟಲೇ ಜಿಲ್ಲಾಡಳಿತದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದರೂ ಮಕ್ಕಳನ್ನು ಜೀವಂತವಾಗಿ ಹೊರ ತರಲು ಸಾಧ್ಯವಾಗಿರಲಿಲ್ಲ.
ಜಾಗೃತಿ: ತೆರೆದ ಕೊಳವೆಬಾವಿಗಳಿಗೆ ಮಕ್ಕಳು ಬಿದ್ದು ದುರಂತ ಸಂಭವಿಸಿದ ಬಳಿಕ ಜಿಲ್ಲಾಡಳಿತ ಜನರಲ್ಲಿ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿತ್ತು. ನೀರು ಬರದೇ ವಿಫಲವಾಗಿರುವ ಕೊಳವೆಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು, ತೆರೆದಿಡುವಂತಿಲ್ಲ. ಒಂದು ವೇಳೆ ತೆರೆದಿಟ್ಟರೆ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಇಷ್ಟಾದರೂ ಜನ ಮತ್ತು ಅಧಿಕಾರಿಗಳು ಮೈಮರೆತಿರುವ ಪರಿಣಾಮ ಮತ್ತೆ ದುರಂತವೊಂದು ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.