ವಿಜಯಪುರ: ‘ರಾಜ್ಯದ ವಿವಿಧ ಜಿಲ್ಲೆಗಳ ರೈತರ ಮತ್ತು ಸರ್ಕಾರಿ ಜಮೀನಿನಲ್ಲಿರುವ ವಕ್ಫ್ ಹೆಸರನ್ನು ನವೆಂಬರ್ 3ರ ಒಳಗೆ ತೆಗೆಯಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
‘ಗಡುವಿನೊಳಗೆ ತೆಗೆಯದಿದ್ದರೇ ಈ ಕರಾಳ ಕಾಯ್ದೆ ವಿರುದ್ಧ ಕಾನೂನು ಹೋರಾಟದ ಜೊತೆಗೆ ರೈತರೊಂದಿಗೆ ಸೇರಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ರೂಪಿಸುವೆ. ಏನಾದರೂ ಅನಾಹುತ ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಕಾರಣವಾಗುತ್ತಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ವಕ್ಫ್ ಕಾಯ್ದೆಯಿಂದ ರೈತರಿಗೆ ಆಗಿರುವ ತೊಂದರೆ ನಿವಾರಣೆ ಸಂಬಂಧ ಟಾಸ್ಕ್ ಫೋರ್ಸ್ ರಚಿಸುವುದಾಗಿ ಹೇಳಿದ್ದನ್ನು ಸ್ವಾಗತಿಸುವೆ’ ಎಂದರು.
‘ವಕ್ಫ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಆರ್‌ಎಸ್‌ಎಸ್ ಕೂಡ ಹೋರಾಟದ ಹಿಂದೆ ಇದೆ. ವಕ್ಫ್ ಕಾಯ್ದೆಯಿಂದ ಮುಸ್ಲಿಂ ರೈತರ ಭೂಮಿಯೂ ಹೋಗುತ್ತಿರುವುದರಿಂದ ಅವರೂ ಸಹ ನಮ್ಮ ಜೊತೆಗೂಡಲಿದ್ದಾರೆ’ ಎಂದರು.
‘ವಿಜಯೇಂದ್ರ ಪಡೆದ ಕಮಿಷನ್ ಎಷ್ಟು?’
‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇದೇ ಸಚಿವ ಜಮೀರ್ ಅಹಮದ್‌ಗೆ ₹ 1 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ಈ ಬಗ್ಗೆ ನಾನು ಆಕ್ಷೇಪ ಎತ್ತಿದಾಗ ವಾಪಸ್ ತೆಗೆದುಕೊಂಡಿದ್ದರು. ಜಮೀರ್ ಅಹಮದ್‌ಗೆ ₹ 1 ಸಾವಿರ ಕೋಟಿ ಕೊಡುವಾಗ ವಿಜಯೇಂದ್ರ ಎಷ್ಟು ಕಮಿಷನ್ ಪಡೆದಿದ್ದರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು. ‘ಯತ್ನಾಳನನ್ನು ಹೊರಹಾಕಿ ಎಂದು ದಿನ ಬೆಳಗಾದರೆ ತಂದೆ ಯಡಿಯೂರಪ್ಪನವರ ಜೊತೆ ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಗೋಗರೆಯುತ್ತಿದ್ದಾರೆ. ಅವರ ಮಾತು ಯಾರೂ ಕೇಳುತ್ತಿಲ್ಲ. ಯತ್ನಾಳನನ್ನು ರಾಜಕೀಯವಾಗಿ ಮುಗಿಸಲು ವಿಜಯೇಂದ್ರಗೆ ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.