ADVERTISEMENT

ವೀರಯೋಧ ರಾಜು ಕರಜಗಿ ಹುತಾತ್ಮ: ಕಂಬನಿ ಮಿಡಿದ ಗ್ರಾಮಸ್ಥರು

ಪರಮೇಶ್ವರ ಎಸ್.ಜಿ.
Published 4 ಜುಲೈ 2024, 5:12 IST
Last Updated 4 ಜುಲೈ 2024, 5:12 IST
<div class="paragraphs"><p>ತಿಕೋಟಾ ಪಟ್ಟಣದ ಹುತಾತ್ಮ ವೀರಯೋಧ ರಾಜು ಕರಜಗಿ ಪಾರ್ಥಿವ ಶರೀರರದ ಮುಂದೆ ರೋಧಿಸುತ್ತಿರುವ ತಾಯಿ, ಪತ್ನಿ ಹಾಗೂ ಸಹೋದರ.</p></div>

ತಿಕೋಟಾ ಪಟ್ಟಣದ ಹುತಾತ್ಮ ವೀರಯೋಧ ರಾಜು ಕರಜಗಿ ಪಾರ್ಥಿವ ಶರೀರರದ ಮುಂದೆ ರೋಧಿಸುತ್ತಿರುವ ತಾಯಿ, ಪತ್ನಿ ಹಾಗೂ ಸಹೋದರ.

   

ತಿಕೋಟಾ: ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್‌ನ 51ನೇ ಯುನಿಟ್ ಮಹರ ರೆಜಿಮೆಂಟ್ 13 ಜಮ್ಮು ಕಾಶ್ಮಿರದಲ್ಲಿ ಹುತಾತ್ಮರಾದ ವೀರಯೋಧ ರಾಜು ಗಿರಮಲ್ಲ ಕರಜಗಿ ಅವರ ಪಾರ್ಥಿವ ಶರೀರ ಹುಟ್ಟೂರು ತಿಕೋಟಾಕ್ಕೆ ಬುಧವಾರ ಬೆಳಿಗ್ಗೆ ಆಗಮಿಸುತ್ತಿದ್ದಂತೆ ‘ರಾಜು ಅಮರ ರಹೇ’, ‘ಬೊಲೊ‌ ಭಾರತ ಮಾತಾಕಿ ಜೈ’ ಎಂಬ ಘೋಷಣೆಗಳು ಮೊಳಗಿದವು.

ಪಾರ್ಥಿವ ಶರೀರ ವಾಡ ಮೈದಾನಕ್ಕೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು. ಹೆತ್ತ ತಾಯಿ ‘ನನ್ನ ರಾಜಾ, ನನ್ನ ರಾಜಕುಮಾರ’ ಎಂದು ಆರೋದಿಸಿದಾದ ನೆರೆದ ಜನರ ಕಣ್ಣುಗಳು ತೇವಗೊಂಡವು. ಪತ್ನಿ, ಸಹೋದರ, ಮಾವ ಹಾಗೂ ಸಂಬಂಧಿಕರು ವೀರಯೋಧನ ಒಡನಾಟ ನೆನಪಿಸಿಕೊಂಡು ಕಣ್ಣೀರು ಹಾಕಿದರು.

ADVERTISEMENT

ಪಟ್ಟಣದ ವಾಡೆ ಮೈದಾನದಲ್ಲಿ ಮದ್ಯಾಹ್ನ 1ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು, ಶಾಲಾ ಮಕ್ಕಳು, ಸುತ್ತಲಿನ ಹಳ್ಳಿಯ ಜನರು ಅಂತಿಮ ದರ್ಶನ ಪಡೆದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಹುಲಜಂತಿ ಮಾಳಿಂಗರಾಯ ಮಹಾರಾಜ, ಬಾಬುರಾವ ಮಹಾರಾಜ, ಮಾಜಿ ಸೈನಿಕರು, ಶಾಲಾ ಕಾಲೇಜಿನ ಮಕ್ಕಳು, ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ಮೆರವಣಿಗೆ: ಹೂಗಳಿಂದ ಸಿಂಗಾರಗೊಂಡ ತೆರೆದ ವಾಹನದಲ್ಲಿ ಮದ್ಯಾಹ್ನ 1ಕ್ಕೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯಿತು. ದಾರಿಯುದ್ದಕ್ಕೂ ದೇಶ ಭಕ್ತಿಗೀತೆಗಳು, ಮತ್ತೆ ಹುಟ್ಟಿ ಬಾ ರಾಜು, ‘ಅಮರ ರಹೇ ಹೈ ರಾಜು’ ಮುಂತಾದ ಘೋಷಣೆಗಳು ಮೊಳಗಿದವು. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಪ್ರಾಥಮಿಕ‌ ಆರೋಗ್ಯ ಕೇಂದ್ರದ ಆವರಣ ತಲುಪಿತು.

ಗೌರವ ವಂದನೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಶಸ್ತ್ರ ಮೀಸಲು ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು.

ಧ್ವಜ ಹಸ್ತಾಂತರ: ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರ ದ್ವಜವನ್ನು ಪತ್ನಿ ಸುಧಾ ಅವರಿಗೆ ಸೇನೆಯ ಹಿರಿಯ ಅಧಿಕಾರಿಗಳು ಹಸ್ತಾಂತರಿಸಿದರು.

ಹುತಾತ್ಮನಾದ ವೀರ ಯೋಧನ ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರ ದ್ವಜವನ್ನು ಯೋಧನ ಪತ್ನಿಗೆ ಸೇನಾ ಅಧಿಕಾರಿಗಳು ಹಸ್ತಾಂತರಿಸಿದರು.
ತಿಕೋಟಾ ಪಟ್ಟಣದ ವಾಡೆ ಮೈದಾನದಲ್ಲಿ ಹುತಾತ್ಮ ವೀರ ಯೋಧ ರಾಜು ಕರಜಗಿ ಅವರ ಪಾರ್ಥಿವ ಶರೀರದ ಮೇಲೆ ರೋಧಿಸುತ್ತಿರುವ ಸಹೋದರಿ.
ತಿಕೋಟಾ ಪಟ್ಟಣದ ವಾಡೆ ಮೈದಾನದಲ್ಲಿ ಹುತಾತ್ಮ ವೀರ ಯೋಧ ರಾಜು ಕರಜಗಿ ಅವರ ಅಂತಿಮ ದರ್ಶನ ಪಡೆಯಲು ನೆರೆದ ಜನರು.
2009ರಿಂದ ಸೇನೆಯಲ್ಲಿ ಕೆಲಸ
ತಿಕೋಟಾ ಪಟ್ಟಣದಲ್ಲಿ ರೈತ ಕುಟುಂಬದ ತಂದೆ ಗಿರಮಲ್ಲ ತಾಯಿ ಅಕ್ಕೂತಾಯಿ ದಂಪತಿಯ ಪುತ್ರನಾಗಿ 1986 ಜೂನ್‌ 1ರಲ್ಲಿ ಜನಿಸಿದ ಯೋಧ ರಾಜು ಅವರು ಒಂದರಿಂದ ಐದನೇ ತರಗತಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆರರಿಂದ ಏಳನೇ ತರಗತಿ ಜತ್ತ ತಾಲ್ಲೂಕಿನ ಉಮರಾಣಿ ಶಾಲೆ ಪ್ರೌಢ ಶಿಕ್ಷಣ ಪಿಯು ಹಾಗೂ ಪದವಿ ಶಿಕ್ಷಣವನ್ನು ತಿಕೋಟಾದ ಎ.ಬಿ.ಜತ್ತಿ ಶಾಲೆಯಲ್ಲಿ ಪೂರೈಸಿದರು. ದೇಶ ಸೇವೆ ಮಾಡುವ ಮಹದಾಸೆ ಇಟ್ಟುಕೊಂಡ ಅವರು ಪದವಿ ಶಿಕ್ಷಣ ಪಡೆಯುವಾಗಲೇ ಎನ್‌ಸಿಸಿ ಆಯ್ಕೆ ಮಾಡಿಕೊಂಡು ಪ್ರತಿದಿನ ದೈಹಿಕ ಕಸರತ್ತು ನಡೆಸುತ್ತಿದ್ದರು. ಸತತ ಪರಿಶ್ರಮದಿಂದ ದೇಶ ಸೇವೆ ಮಾಡಲು ಸೈನಿಕ ಹುದ್ದೆಗೆ ಆಯ್ಕೆಯಾಗಿ 2009 ರ ಮಾರ್ಚ್‌ 21ರಂದು ಕರ್ತವ್ಯಕ್ಕೆ ಹಾಜರಾದರು. 2013 ಮೇ 12 ರಂದು ಅಕ್ಕ ಭಾಗ್ಯಶ್ರಿ ಅವರ ಮಗಳು ಸುಧಾ ಜೊತೆ ವೈವಾಹಿಕ ಜೀವನ ಆರಂಭಿಸಿದರು. ಮಧ್ಯಪ್ರದೇಶ ಪಂಜಾಬ ಆಸ್ಸಾಂ ಜಮ್ಮು ಕಾಶ್ಮಿರದಲ್ಲಿ ಸೇವೆ ಸಲ್ಲಿಸಿದ್ದು ಈಚೆಗಷ್ಟೇ ಹವಾಲ್ದಾರ್ ಆಗಿ ಪದೋನ್ನತಿ ಹೊಂದಿದ್ದರು. ಇನ್ನು ಎರಡ್ಮೂರು ವರ್ಷಗಳಲ್ಲಿ ನಿವೃತ್ತಿ ಹೊಂದುತ್ತಿದ್ದರು. ‘ದಿನವೂ ವಿಡಿಯೊ ಕರೆ ಮಾಡಿ ಕುಟುಂಬದವರೊಂದಿಗೆ ಮಾತನಾಡುತ್ತಿದ್ದ. ಭಾನುವಾರ ಬೆಳಿಗ್ಗೆ ಹುತಾತ್ಮ ಆಗಿದ್ದಾನೆಂದು ಸೇನಾ ಸಿಬ್ಬಂದಿಯಿಂದ ಸುದ್ದಿ ಬಂತು’ ಎಂದು ಸಹೋದರ ಮಹಾದೇವ ‘ಪ್ರಜಾವಾಣಿ’ ಬಳಿ ದುಃಖ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.