ADVERTISEMENT

ಕೈಗಾರಿಕೆ, ಪ್ರವಾಸೋದ್ಯಮ, ನೀರಾವರಿಗೆ ಸಿಗುವುದೇ ಆದ್ಯತೆ

ಜಿಲ್ಲೆಯ ಸಚಿವರು, ಶಾಸಕರ ಮೇಲೆ ಬೆಟ್ಟದಷ್ಟು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 5:35 IST
Last Updated 14 ಫೆಬ್ರುವರಿ 2024, 5:35 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ವಿಜಯಪುರ: ಪ್ರಸ್ತುತ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಇಬ್ಬರು ಪ್ರಭಾವಿ ಸಚಿವರು, ಒಬ್ಬರು ನಿಗಮದ ಅಧ್ಯಕ್ಷರು ಸೇರಿದಂತೆ ಜಿಲ್ಲೆಯ ಆರು ಶಾಸಕರು ಇರುವುದರಿಂದ ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ, ಕೊಡುಗೆಗಳು ಲಭಿಸುವ ನಿರೀಕ್ಷೆ ಗರಿಗೆದರಿದೆ.

ಕೈಗಾರಿಕೆ, ನೀರಾವರಿ, ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ದಶಕಗಳ ಬೇಡಿಕೆಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌. ನಾಡಗೌಡ ಅವರು ಸ್ಪಂದಿಸುವ ನಿರೀಕ್ಷೆ ಇದೆ.

ADVERTISEMENT

ಯುಕೆಪಿಗೆ ಅನುದಾನ:

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕೆ ಸರ್ಕಾರ ಪ್ರತಿ ವರ್ಷ ₹50 ಸಾವಿರ ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ ಅವರು ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.

ಪ್ರವಾಸಿತಾಣಗಳಿಗೆ ಆದ್ಯತೆ:

ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ್‌, ಬಸವನ ಬಾಗೇವಾಡಿ ಸೇರಿದಂತೆ ಐತಿಹಾಸಿಕ ಪ್ರವಾಸಿತಾಣಗಳ ಸಂರಕ್ಷಣೆ, ಅಭಿವೃದ್ಧಿಗೆ ಹಾಗೂ ಪ್ರವಾಸಿಗರ ಆಕರ್ಷಣೆಗೆ ಬಜೆಟ್‌ನಲ್ಲಿ ಹೊಸ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.

ಬಸವ ಜನ್ಮಭೂಮಿ ಬಸವನ ಬಾಗೇವಾಡಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂಬುದು ಸಚಿವ ಶಿವಾನಂದ ಪಾಟೀಲ ಅವರ ಆಶಯವಾಗಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ಕೈಗಾರಿಕೆ ಸ್ಥಾಪನೆ:

ಎಂ.ಬಿ.ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಗೆ ಸಾಕಷ್ಟು ನೀರಾವರಿ ಯೋಜನೆ ತಂದು ಸೈ ಎನಿಸಿಕೊಂಡಿದ್ದು, ಇದೀಗ ಬೃಹತ್‌ ಕೈಗಾರಿಕಾ ಸಚಿವರಾಗಿರುವುದರಿಂದ ಜಿಲ್ಲೆಗೆ ಕೈಗಾರಿಕೆಯನ್ನು ತರುವ ನಿರೀಕ್ಷೆ ಅಗಾದವಾಗಿದೆ. 

ವಿಮಾನ ಹಾರಾಟ:

ಎಂ.ಬಿ.ಪಾಟೀಲ ಅವರು ಮೂಲಸೌಲಭ್ಯ ಸಚಿವರೂ ಆಗಿರುವುದರಿಂದ ಈಗಾಗಲೇ ಮುಕ್ತಾಯದ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಅಗತ್ಯ ಇರುವ ಸೌಲಭ್ಯ ಕಲ್ಪಿಸಲು ಬೇಕಿರುವ ಅನುದಾನ ಬಜೆಟ್‌ನಲ್ಲಿ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

ವೈದ್ಯಕೀಯ ಮಹಾವಿದ್ಯಾಲಯ:

ವಿಜಯಪುರ ಜಿಲ್ಲಾಸ್ಪತ್ರೆಯು ವೈದ್ಯಕೀಯ ಮಹಾವಿದ್ಯಾಲಯ ಆಗಲು ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯ, ಸವಲತ್ತು ಹೊಂದಿದ್ದು, ಕಾರಣಾಂತರದಿಂದ ನನೆಗುದಿಗೆ ಬಿದ್ದಿರುವ ವೈದ್ಯಕೀಯ ಮಹಾವಿದ್ಯಾಲಯ ಈ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ತೋಟಗಾರಿಕೆ ಮಹಾವಿದ್ಯಾಲಯ:

ಈ ಹಿಂದೆ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಆಲಮೇಲಕ್ಕೆ ಘೋಷಣೆಯಾಗಿದ್ದ ತೋಟಗಾರಿಕೆ ಮಹಾವಿದ್ಯಾಲಯ ಆರಂಭವಾಗದೇ ನನೆಗುದಿಗೆ ಬಿದ್ದಿದ್ದು, ಈ ನಿಟ್ಟಿನಲ್ಲಿ ಸಿಂದಗಿ ಶಾಸಕ ಶೋಕ ಮನಗೂಳಿ ಸಾಕಷ್ಟು ಪ್ರಯತ್ನ ನಡೆಸಿದ್ದು, ಕ್ಷೇತ್ರದ ಜನತೆಗೆ ಭರವಸೆ ನೀಡಿರುವುದರಿಂದ ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.