ADVERTISEMENT

ಆಲಮಟ್ಟಿ: ಜನರ ಎಣಿಕೆ ಮಾಡುವ ಕ್ಯಾಮೆರಾ..!

ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾ ಅಳವಡಿಕೆ

ಚಂದ್ರಶೇಖರ ಕೊಳೇಕರ
Published 18 ಜುಲೈ 2023, 5:30 IST
Last Updated 18 ಜುಲೈ 2023, 5:30 IST
ಆಲಮಟ್ಟಿಯ ಸಂಗೀತ ಕಾರಂಜಿ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಕಂಟ್ರೋಲ್ ಯೂನಿಟ್
ಆಲಮಟ್ಟಿಯ ಸಂಗೀತ ಕಾರಂಜಿ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಕಂಟ್ರೋಲ್ ಯೂನಿಟ್   

ಆಲಮಟ್ಟಿ: ‘ಉದ್ಯಾನಗಳ ಊರು’ ಆಲಮಟ್ಟಿಗೆ ಕಾಲಿಟ್ಟರೆ ಸಾಕು ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಹೌದು, ಒಂದಲ್ಲ, ಎರಡಲ್ಲ 107 ವಿವಿಧ ತಂತ್ರಜ್ಞಾನದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ತಮ್ಮ ಪ್ರತಿ ಹೆಜ್ಜೆಯೂ ಸೆರೆಯಾಗುತ್ತದೆ.

ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿಗೆ ಪ್ರವೇಶಿಸುವ ಸ್ಥಳದಿಂದ ಆರಂಭಗೊಳ್ಳುವ ಸಿಸಿಟಿವಿ ಕ್ಯಾಮೆರಾಗಳು ಇಡೀ ರಸ್ತೆಯ ಎರಡೂ ಬದಿಗೂ ಪ್ರತಿ 10 ಮೀಟರ್‌ಗೆ ಒಂದರಂತೆ ಕಣ್ಗಾವಲು ಮಾಡುತ್ತವೆ.

ರಸ್ತೆಯ ಜತೆಗೆ ಆಲಮಟ್ಟಿಯ ಮೊಘಲ್, ಇಟಾಲಿಯನ್, ಫ್ರೆಂಚ್ ಉದ್ಯಾನಗಳು, ಸಂಗೀತ ಕಾರಂಜಿ, ಲೇಸರ್ ಶೋ ಸೇರಿದಂತೆ ಇಡೀ 77 ಎಕರೆ ಉದ್ಯಾನ ಸಮುಚ್ಛಯದಲ್ಲಿ ಎಲ್ಲೇ ಓಡಾಡಿದರೂ ಅದು ಸೆರೆಯಾಗುತ್ತದೆ. ಪ್ರತಿಯೊಬ್ಬರ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗುತ್ತವೆ.

ADVERTISEMENT

ಪ್ರತಿ ವ್ಯಕ್ತಿಯನ್ನು ಎಣಿಸಿ ಲೆಕ್ಕ ಹಾಕಿ ಹೇಳುವ ಕ್ಯಾಮೆರಾ 77,  ಉದ್ಯಾನಗಳ ಎಂಟ್ರನ್ಸ್ ಪ್ಲಾಜಾ, ಸಂಗೀತ ಕಾರಂಜಿ, ಲೇಸರ್ ಶೋ ಬಳಿ ಕೂಡಿಸಿರುವ, ಆರ್ಟೀಫಿಸಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಸಾಫ್ಟ್‌ವೇರ್ ಅಳವಡಿಸಿರುವ 8 ಕ್ಯಾಮೆರಾಗಳು ಎಷ್ಟು ಜನ ಉದ್ಯಾನ ಪ್ರವೇಶಿಸಿದರು ಎಂಬುದರ ನಿಖರ ಅಂಕಿ ಅಂಶಗಳನ್ನು ನೀಡುತ್ತದೆ. ಟಿಕೆಟ್ ಕೌಂಟರ್ ಬಳಿ ಎಷ್ಟು ಜನ ಇದ್ದರು, ವಿವಿಧ ಪ್ರದರ್ಶನಗಳಲ್ಲಿ ಎಷ್ಟು ಜನ ಪ್ರವಾಸಿಗರು ಇದ್ದರು ಎಂಬುದರ ಮಾಹಿತಿ ನೀಡುತ್ತದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ಮಾಹಿತಿ ನೀಡಿದರು.

ಎಂಟ್ರನ್ಸ್ ಪ್ಲಾಜಾದ ಜಲದೇವತೆ ಬಳಿ ಹಾಗೂ ಸಂಗೀತ ಕಾರಂಜಿ ಬಳಿ ಪನೋರೋಮಿಕ್ ವ್ಯೂವುಳ್ಳ 360 ಡಿಗ್ರಿ ತಿರುಗುವ 2 ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಸ್ಪಷ್ಟ ದೃಶ್ಯಗಳು: ರಸ್ತೆಯ ಎರಡು ಬದಿ ಸಾಲಾಗಿ ಹಚ್ಚುವ ಪ್ರವಾಸಿ ವಾಹನಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದವು. ಹೀಗಾಗಿ ವಾಹನಗಳ ನಂಬರ್ ಸಮೇತ ಪ್ರತಿಯೊಂದು ದೃಶ್ಯಗಳು, ಹಗಲು ಕಂಡಷ್ಟೇ ರಾತ್ರಿಯ ಚಿತ್ರಗಳು, ಪ್ರತಿಯೊಂದು ಚಲನವಲನಗಳು ಸ್ಪಷ್ಟವಾಗಿ ಕ್ಯಾಮೆರಾದಲ್ಲಿ ಗೋಚರವಾಗುತ್ತವೆ.

ವಿದ್ಯುತ್ ಇಲ್ಲದಿದ್ದರೂ ದೃಶ್ಯಗಳು ಸೆರೆ: ಪ್ರತಿಯೊಂದು ಕ್ಯಾಮೆರಾಗಳನ್ನು 8 ಅಡಿ ಎತ್ತರದ ಕಂಬ ಅಳವಡಿಸಿ ಅದರ ಮೇಲೆ ಕೂರಿಸಲಾಗಿದೆ. ಯಾವುದೇ ಕ್ಯಾಮೆರಾಕ್ಕೆ ಜೋಡಿಸಿರುವ ಸಂಪರ್ಕ ಕೇಬಲ್ ಗಳು ಕಾಣುವುದಿಲ್ಲ, ಅಂಡರ್ ಗೌಂಡ್ ಕೇಬಲ್ ಗಳನ್ನು ಓಎಫ್‌ಸಿ ಮಾದರಿಯಲ್ಲಿ ಅಳವಡಿಸಿ ಕಂಬಗಳ ಒಳಗಿನಿಂದ ಕೇಬಲ್ ಕಾಣದಂತೆ ಹಾಕಲಾಗಿದೆ.

ಪ್ರತಿ ಕ್ಯಾಮೆರಾದ ಕಂಬದ ಕೆಳಗಡೆ ಯುಪಿಎಸ್ ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಇಲ್ಲದಿದ್ದರೂ ನಾಲ್ಕರಿಂದ ಐದು ಗಂಟೆ ಕ್ಯಾಮೆರಾ ಚಾಲು ಇರಲಿದೆ. ಈ ರೀತಿಯ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾ ಜತೆಗೆ ಅಳವಡಿಕೆಯ ವಿಧಾನವೂ ಹೊಸದು, ಈ ರೀತಿ ಸಾರ್ವಜನಿಕ ಕ್ಷೇತ್ರದಲ್ಲಿ ಅಳವಡಿಸಿದ್ದು ಸದ್ಯಕ್ಕೆ ರಾಜ್ಯದಲ್ಲಿಯೇ ಹೊಸದು ಹಾಗೂ ವಿಶೇಷ ಎಂದು ಕ್ಯಾಮೆರಾ ಅಳವಡಿಕೆಯ ಗುತ್ತಿಗೆ ಪಡೆದ ಹುಬ್ಬಳ್ಳಿಯ ಸೋಮೀಂದ್ರ ಮಾರ್ಕೆಟಿಂಗ್ ಕಂಪನಿಯ‌ ಮುಖ್ಯಸ್ಥ ಮೋಹನ ದೇಸಾಯಿ ಹೇಳಿದರು.

₹ 1.98 ಕೋಟಿ ವೆಚ್ಚ: ಈ ಎಲ್ಲ ವಿಶೇಷ ಕ್ಯಾಮೆರಾಗಳ ಅಳವಡಿಕೆ ಕಾರ್ಯ, ಜತೆಗೆ ಐದು ವರ್ಷಗಳ ನಿರ್ವಹಣೆ, ಈ ಎಲ್ಲಾ ಕ್ಯಾಮೆರಾಗಳ ಕಂಟ್ರೋಲ್ ಯುನಿಟ್ ನಿರ್ಮಾಣಕ್ಕಾಗಿ ₹ 1.98 ಕೋಟಿಯನ್ನು ವ್ಯಯಿಸಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ಈ ಕ್ಯಾಮೆರಾಗಳ ನಿಯಂತ್ರಣಾ ಘಟಕ ಸಂಗೀತ ಕಾರಂಜಿ ಬಳಿ ಇದೆ. ಅಲ್ಲಿ 55 ಇಂಚು ಅಗಲ ಪರದೆಯ ಎಲ್ ಇಡಿ ಟಿವಿ ಅಳವಡಿಸಲಾಗಿದ್ದು, ಅಲ್ಲಿ ಈ ದೃಶ್ಯಗಳು ಸೆರೆಯಾಗಲಿವೆ. ಒಂದು ತಿಂಗಳ ಕಾಲ ಸೆರೆಯಾದ ದೃಶ್ಯಗಳ ಸಂಗ್ರಹಣೆ ಇರಲಿದೆ ಎಂದರು.

ಒಟ್ಟಾರೆ ಪ್ರವಾಸಿಗರ ಬಹುಬೇಡಿಕೆಯಾಗಿದ್ದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕಾರ್ಯಾರಂಭಗೊಂಡಿದ್ದು, ಪ್ರತಿಯೊಬ್ಬರ ಚಲನವಲನ ಸೆರೆಯಾಗಲಿದೆ. ಕಳ್ಳತನ, ಇನ್ನೀತರ ಅಪರಾಧಗಳಿಗೆ ಕಡಿವಾಣ ಬೀಳಲಿದೆ. ರಾಕ್ ಉದ್ಯಾನದೊಳಗೂ ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ.

ಆಲಮಟ್ಟಿಯ ಉದ್ಯಾನದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ
ರಾತ್ರಿ ಕತ್ತಲೆಯಲ್ಲೂ ಸ್ಪಷ್ಟವಾದ ಚಿತ್ರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು
ಸಿಸಿಟಿವಿ ಕ್ಯಾಮೆರಾ ಅಳವಡಿಕೆಯನ್ನು ಮುಖ್ಯ ಎಂಜಿನಿಯರ್ ಎಚ್. ಸುರೇಶ ಮತ್ತೀತರ ಅಧಿಕಾರಿಗಳು ಪರಿಶೀಲಿಸಿದರು
ಪ್ರವಾಸಿಗರ ಸುರಕ್ಷತೆ ಭದ್ರತೆ ಹೆಚ್ಚಲಿದೆ. ಯಾವುದೇ ಅಹಿತಕರ ಘಟನೆ ನಡೆದರೆ 5 ನಿಮಿಷದಲ್ಲಿ ಅಲ್ಲಿನ ಸಿಸಿಟಿವಿ ಕ್ಯಾಮೆರಾದ ವಿಡಿಯೊ ದೃಶ್ಯಗಳನ್ನು ನೀಡಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೊಂದಿದ ಕ್ಯಾಮೆರಾ ಅಳವಡಿಸಿರುವುದು ವಿಶೇಷ
–ಎಚ್.ಸುರೇಶ ಮುಖ್ಯ ಎಂಜಿನಿಯರ್ ಆಲಮಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.