ಚಡಚಣ: ‘ಬೀರಲಿಂಗೇಶ್ವರರ ಐಕ್ಯ ಸ್ಥಳ, ಹಾಲುಮತ ಸಮಾಜದ ಕಾಶಿ ಎಂದು ಕರೆಯುವ ಶಿರಾಡೋಣ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಬದ್ಧ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಹೇಳಿದರು.
ಸಮೀಪದ ಶಿರಾಡೋಣ ಗ್ರಾಮದಲ್ಲಿ ಶನಿವಾರ ಜರುಗಿದ ಬೀರಲಿಂಗೇಶ್ವರ ಹಾಗೂ ಶೀಲವಂತಿ ದೇವಿ ಜಾತ್ರಾ ಮಹೋತ್ಸವ ಹಾಗೂ ಬೀರಲಿಂಗೇಶ್ವರ ಹಾಗೂ ಶೀಲವಂತಿ ದೇವಿ ದೇವಾಲಯಗಳ ನೂತನ ಕಟ್ಟಡಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಭೂಮಿ ಪೂಜೆ ನೆರವೇರಿಸಿದ ಕಾಗಿನೆಲೆಯ ಕನಕ ಗುರು ಪೀಠದ ತಿಂಥಿಣಿ ಬ್ರೀಜ್ ಶಾಖಾ ಮಠದ ಪೀಠಾಧಿಪತಿ ಸಿದ್ದರಾಮಾನಂದ ಶ್ರೀ, ‘ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರನ್ನು ಸಂಪರ್ಕಿಸಿ, ಸೀಗಿ ಮಠದ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಲಾಗುವುದು’ ಎಂದರು.
ಸೀಗಿಮಠ ಟ್ರಸ್ಟ್‌ನ ಗೌರವ ಅಧ್ಯಕ್ಷರೂ ಆದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ‘ಸೀಗಿ ಮಠದ ಅಭಿವೃದ್ಧಿಗೆ ಸಹಕರಿಸುತ್ತೇನೆ’ ಎಂದರು.
ಶಿಕ್ಷಕ ಗಿರಿಮಲ್ಲ ಬೇಳ್ಳುಂಡಗಿ, ಕರ್ನಾಟಕ ಗಡಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹನುಮಂತ ಬನಸೊಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೀಗಿ ಮಠ ಟ್ರಸ್ಟ್ ಅಧ್ಯಕ್ಷ ಜಕ್ಕಪ್ಪ ಕಾಟೆ ಇದ್ದರು. ಸಾಕ್ಷತ ಬಗಲಿ, ಬಂಗಾರೇವ್ವ ಬಗಲಿ ಸಂಡಿಗರು ಪ್ರಾರ್ಥಿಸಿದರು. ಶಿಕ್ಷಕ ರಾಮಚಂದ್ರ ಚೋಪಡೆ ನಿರೂಪಿಸಿದರು. ರಾಯಗೊಂಡ ಪೂಜಾರಿ ವಂದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.