ಚಡಚಣ: ಸ್ಥಳೀಯ ಪಟ್ಟಣ ಪಂಚಾಯ್ತಿಯ 16 ವಾರ್ಡ್‌ಗಳಿಗೆ ಡಿ.27ರಂದು ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಮತ ಬೇಟೆಗೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಪೈಪೋಟಿ ನಡೆಸಿದ್ದಾರೆ.
ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟರೆ, ಒಂದೆರಡು ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಒಟ್ಟು 16 ವಾರ್ಡ್‌ಗಳಲ್ಲಿ 16 ಸ್ಥಾನಗಳಿಗೆ 41 ಜನ ಅಭ್ಯರ್ಥಿಗಳು ತಮ್ಮ ಅದೃಷ್ಟ ಪಣಕ್ಕಿಟ್ಟಿದ್ದಾರೆ. ಮತದಾರರ ಓಲೈಸಲು ಹಲವು ಕಸರತ್ತು ನಡೆಸಿದರೆ, ಮತ ಬೇಟೆಗೆ ತಮ್ಮ ಮಕ್ಷದ ವರಿಷ್ಠರನ್ನು ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಟೊರಿಕ್ಷಾಗಳಲ್ಲಿ ಧ್ವನಿರ್ಧಕಗಳ ಮೂಲಕ ನಡೆಸಲಾಗುತ್ತಿದ್ದ ಪ್ರಚಾರ ಸೋಮವಾರ ಕೊನೆಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳು ಕರಪತ್ರಗಳನ್ನು ಹಿಡಿದು ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸುತ್ತಿರುವದು ಸಾಮಾನ್ಯವಾಗಿದೆ.
ಕಾಗ್ರೆಸ್ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಿದರೆ, ಬಿಜೆಪಿ ಮುಖಂಡರು ಪ್ರಧಾನಿ ಮೋದಿ ಹೆಸರು, ಸಾಧನೆ ಹೇಳಿಕೊಂಡು ಮತಯಾಚಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾದರೆ ತಾವು ಮಾಡುವ ಕೆಲಸದ ಭರವಸೆ ನೀಡಿ ಮತ ಯಾಚಿಸುತ್ತಿದ್ದಾರೆ.
ಮುಖಂಡರ ಕಸರತ್ತು: ತೀವ್ರ ಪ್ರತಿಷ್ಠೆಯ ಪಣವಾಗಿ ತೆಗೆದುಕೊಂಡಿರುವ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವೀಠ್ಠಲ ಕಟಕದೋಂಡ, ಮುಖಂಡರಾದ ಎಂ.ಆರ್.ಪಾಟೀಲ, ಆರ್.ಡಿ ಹಕ್ಕೆ ಸೇರಿದಂತೆ ಹಲವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರೆ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಮುಖಂಡರಾದ ಡಾ.ಗೋಪಾಲ ಕಾರಜೋಳ, ಸಂಜೀವ ಐಹೊಳೆ, ಚಿದಾನಂದ ಚಲುವಾದಿ ಸೇರಿದಂತೆ ಜಿಲ್ಲಾ ಪ್ರಮುಖರು ಬಹಿರಂಗ ಪ್ರಚಾರದಲ್ಲಿ ಗುರುತಿಸಿಕೊಂಡಿದ್ದಾರೆ.
ಡಿ.27 ರಂದು ಮತದಾನ ನಡೆದು, ಡಿ.30ಕ್ಕೆ ಅಭ್ಯರ್ಥಿಗಳ ಅದೃಷ್ಟ ಬಹಿರಂಗಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.