ಚಡಚಣ: ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆದು ಸುಮಾರು ಎಂಟು ತಿಂಗಳು ಗತಿಸಿದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಯಾವಾಗ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಡಿಸೆಂಬರ್ 27ರಂದು ಚುನಾವಣೆ ನಡೆದು, ಡಿ.30ಕ್ಕೆ ಫಲಿತಾಂಶವೂ ಪ್ರಕಟವಾಗಿದೆ. ಸುಮಾರು 16 ಸದಸ್ಯರಿರುವ ಪಟ್ಟಣ ಪಂಚಾಯ್ತಿಗೆ 8 ಜನ ಬಿಜೆಪಿ, 4 ಜನ ಕಾಂಗ್ರೆಸ್ ಹಾಗೂ 4 ಜನ ಸದಸ್ಯರು ಪಕ್ಷೇತರರಾಗಿ ಆಯ್ಕೆಯಾದರು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಮಿಸಲಾತಿ ನಿಮಿತ್ಯ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಇರುವುದರಿಂದ ಆಯ್ಕೆಗೆ ನಿರ್ಬಂಧ ಹೇರಲಾಗಿತ್ತು. ಈಗ ಈ ನಿರ್ಬಂಧ ತೆರವುಗೊಂಡ ನಿಮಿತ್ಯ ರಾಜ್ಯ ಸರ್ಕಾರ ಆ.5 ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ.
ಮೀಸಲಾತಿ ಪ್ರಕಟಿಸಿ, ಚುನಾವಣೆ ನಡೆಸಲು ಆದೇಶ ಹೊರಡಿಸಿ 20 ದಿನ ಕಳೆದರೂ ಚುನಾವಣೆ ದಿನಾಂಕ ಪ್ರಕಟಿಸದಿರುವುದು ಆಯ್ಕೆಯಾದ ಸದಸ್ಯರಲ್ಲಿ ಬೇಸರ ಮೂಡಿಸಿದೆ.
ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿಗಳು ಆದ ತಹಶೀಲ್ದಾರ್ ಅವರಿಗೆ ಕಳೆದ ಒಂದು ವಾರದ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಆದೇಶ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಪಟ್ಟಣ ಪಂಚಾಯ್ತಿ ನೂತನ ಸದಸ್ಯ ರಾಜು ಕೋಳಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಪಟ್ಟಣದ ಅಭಿವೃದ್ಧಿ ಸ್ಥಗಿತಗೊಂಡಿದೆ. ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಡಚಣ ಪಟ್ಟಣ ಪಂಚಾಯ್ತಿಗೆ ಅಧ್ಯಕ್ಷಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕೂಡಲೇ ಚುನಾವಣೆ ನಡೆಸಲಾಗುವುದು.-ಸಂಜಯ ಇಂಗಳೆ ತಹಶೀಲ್ದಾರ್ ಚಡಚಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.