ADVERTISEMENT

ವಿಜಯಪುರ: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ನಿಧನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 7:44 IST
Last Updated 13 ಏಪ್ರಿಲ್ 2022, 7:44 IST
ಶರಣಪ್ಪ ಕಂಚ್ಯಾಣಿ
ಶರಣಪ್ಪ ಕಂಚ್ಯಾಣಿ   

ವಿಜಯಪುರ: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ (82) ಬುಧವಾರ ಬೆಳಿಗ್ಗೆ ನಿಧನರಾದರು.

ವಿಜಯಪುರದ ರಾಜೇಂದ್ರನಗರ ಎನ್.ಸಿ. ಸಿ. ಆಫೀಸ್ ಬಳಿ ಇರುವ ಅವರ ಕಿರಿಯ ಪುತ್ರ ಮಹಂತೇಶ ಕಂಚ್ಯಾಣಿಯವರ ಮನೆಯಲ್ಲಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಬಿ.ಎಲ್.ಡಿ. ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕವಿ ಶರಣಪ್ಪ ಕಂಚ್ಯಾಣಿ ಅವರ ಇಚ್ಛೆಯಂತೆ ಕುಟುಂಬಸ್ಥರು ದೇಹದಾನ ಮಾಡಲಿದ್ದಾರೆ. ನಿವೃತ್ತ ಪ್ರಾಚಾರ್ಯ ಅರವಿಂದ ಕಂಚ್ಯಾಣಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಸೇರಿದಂತೆ ಐವರು ಪುತ್ರರು, ಪುತ್ರಿಯರು ಇದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದವರಾಗಿದ್ದ ಕಂಚ್ಯಾಣಿ ಶರಣಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ವಿಜಯಪುರದಲ್ಲಿ ನೆಲೆಸಿದ್ದರು.

ಶರಣಪ್ಪ ಕಂಚ್ಯಾಣಿ ಅವರು, ಮಕ್ಕಳ ಸಾಹಿತ್ಯ, ಕವನ, ಮಕ್ಕಳ ಕಥೆ, ಶಿಶು ಪ್ರಾಸ, ಖಂಡ ಕಾವ್ಯ ಚರಿತ್ರೆ ಸೇರಿದಂತೆ ಇತರೆ ವಿಷಯಗಳ ಕುರಿತು ಸಾಹಿತ್ಯ ಕೃಷಿ ಮಾಡಿದ್ದರು.

ಮಕ್ಕಳ ಸಾಹಿತಿಯಾಗಿ ರಾಜ್ಯ, ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT