ವಿಜಯಪುರ: ಮಹಾನಗರ ಪಾಲಿಕೆಯ ವಾರ್ಡ್ ನಂ.27, 28 ಹಾಗೂ 31ರ ವ್ಯಾಪ್ತಿಯಲ್ಲಿ ಬರುವ ನವಭಾಗ ರಸ್ತೆ, ಒಳಚರಂಡಿ ಮೇಲೆ ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡ ಕಟ್ಟಡಗಳನ್ನು ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ, ಮುಂಬರುವ ದಿನಗಳಲ್ಲಿ ನಗರದ ವಿವಿಧೆಡೆ ಒತ್ತುವರಿಯಾಗಿರುವ ಸಾರ್ವಜನಿಕ ರಸ್ತೆಗಳನ್ನು ಗುರುತಿಸಿಕೊಂಡು ತೆರವುಗೊಳಿಸಲು ಕ್ರಮ ವಹಿಸಬೇಕು. ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳಬೇಕು. ರಾಜ ಕಾಲುವೆಗಳ ಮೂಲಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮವಹಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
‘ನವಭಾಗ ರಸ್ತೆಯು ನಗರದ ಮಾಸ್ಟರ್ ಪ್ಲಾನ್‍ನಡಿ 60 ಅಡಿ ಮುಖ್ಯ ರಸ್ತೆಯಾಗಿದ್ದು, ಜನ-ವಾಹನ ಸಂಚಾರಕ್ಕೆ ಅನಾನೂಕುಲವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯ ನೀರು ಸಂಗ್ರಹಣೆಯಾಗಿ ಅನಾನೂಕೂಲವಾಗಿರುವುದರಿಂದ ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳಲಾಗಿದೆ’ ಎಂದರು.
‘ಅತಿಕ್ರಮಣ ಮಾಡಿಕೊಂಡ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಅನೇಕ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಒತ್ತುವರಿಯಾದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿಕೊಂಡಿದ್ದರು. ನೋಟಿಸ್ ನೀಡಿದರೂ ತೆರವುಗೊಳಿಸದೇ ಇರುವ ಕಟ್ಟಡಗಳನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಯಿತು’ ಎಂದು ಹೇಳಿದರು.
ತೆರವು ಕಾರ್ಯಾಚರಣೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ಜರುಗಿದ್ದು, ಪಾಲಿಕೆಯ ಉಪ ಆಯುಕ್ತ ವಿಠ್ಠಲ ಹೊನ್ನಳ್ಳಿ, ಮಹಾವೀರ ಬೋರಣ್ಣವರ, ವಲಯ ಆಯುಕ್ತ ಶಿವಪ್ಪ ಅಂಬಿಗೇರ, ಸುನೀಲ ಪಾಟೀಲ, ಕಾರ್ಯಪಾಲಕ ಎಂಜಿನಿಯರ್ ವಿದ್ಯಾಧರ ನ್ಯಾಮಗೊಂಡ, ಎಸ್.ಎ.ಇನಾಮದಾರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಯಲ್ಲಪ್ಪ ಹಳ್ಳಿ ಸೇರಿದಂತೆ ಪಾಲಿಕೆಯ ವಿವಿಧ ಸಿಬ್ಬಂದಿ ಉಪಸ್ಥಿತರಿದ್ದರು.
ರಸ್ತೆ ಅತಿಕ್ರಮಣ ತೆರವು
ಕೊಲ್ಹಾರ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ ಚಲವಾದಿ ನೇತೃತ್ವದಲ್ಲಿ ಯುಕೆಪಿ ಕ್ರಾಸ್‌ನಲ್ಲಿ ಅಂಗಡಿಕಾರರು ಮಾಡಿದ್ದ ರಸ್ತೆ ಅತಿಕ್ರಮಣವನ್ನು ಮಂಗಳವಾರ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕ್ರಾಸ್ ಇದಾಗಿದ್ದು ಇಲ್ಲಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಾ ನಿಲ್ಲಲು ಪಾದಚಾರಿ ರಸ್ತೆಯೇ ಇಲ್ಲದಂತಾಗಿ ರಸ್ತೆ ಮಧ್ಯದಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ‘ಯುಕೆಪಿ ಕ್ರಾಸ್‌ನಲ್ಲಿ ಕೈಗೊಂಡಿರುವ ಕಾರ್ಯಾಚರಣೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ’ ಎಂದು ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.