ADVERTISEMENT

ಸಂಘರ್ಷದಿಂದ ಆಂದೋಲನ ನಿರ್ಮಾಣ: ಮೇಧಾ ಪಾಟ್ಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 13:55 IST
Last Updated 14 ಜನವರಿ 2022, 13:55 IST
ವಿಜಯಪುರ ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ್ತಿ, ಪರಿಸರವಾದಿ ಮೇಧಾ ಪಾಟ್ಕರ್ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ್ತಿ, ಪರಿಸರವಾದಿ ಮೇಧಾ ಪಾಟ್ಕರ್ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ:ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ. ಒಬ್ಬ ಮಹಿಳೆಗೆ ಅನ್ಯಾಯ, ತೊಂದರೆಯಾದಾಗ ಆಕೆಯ ಪರವಾಗಿ ಇನ್ನೊಬ್ಬ ಮಹಿಳೆ ಇದ್ದರೆ ಅಲ್ಲಿ ಆಂದೋಲನ ಆರಂಭವಾಗುತ್ತದೆ. ಆಗ ಆಕೆಗೆ ಹೋರಾಟ ಮಾಡುವ ಶಕ್ತಿ ಬರುತ್ತದೆ. ಪ್ರತಿಯೊಂದು ಆಂದೋಲನವು ಸಂಘರ್ಷದಿಂದ ನಿರ್ಮಾಣವಾಗಿತ್ತದೆ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಗೂ ಪರಿಸರವಾದಿ ಮೇಧಾ ಪಾಟ್ಕರ್ ಹೇಳಿದರು.

ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಮೇಲಾಗುವ ಅನ್ಯಾಯ, ಅತ್ಯಾಚಾರ, ದುಷ್ಕೃತ್ಯಗಳು ನಡೆಯದಂತೆ ಸುಂದರ ಸಮಾಜ ನಿರ್ಮಾಣವಾಗಬೇಕು ಎಂದರು.

ADVERTISEMENT

22ನೇ ಶತಮಾನ ಆರಂಭವಾದರೂ ಇನ್ನೂ ಅನೇಕ ಮಹಿಳೆಯರು ಮೂಲ ಸೌಕರ್ಯಗಳಿಂದ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಾಲ್ಕು ಗೋಡೆಯ ಮಧ್ಯದಲ್ಲಿಯೇ ಜೀವನ ನಡೆಸುತ್ತಿರುವ ಇವರಿಗೆ ವಿಶೇಷ ಕಾಳಜಿ, ಉತ್ತಮ ಶಿಕ್ಷಣ ನೀಡಿದಾಗ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಹೇಳಿದರು.

ಮಹಿಳೆಯರನ್ನು ಗೌರವಿಸುವ ದೇಶದಲ್ಲಿ ಅವರಿಗೆ ಅಪಮಾನ, ಅನ್ಯಾಯ ನಡೆಯುತ್ತಿದೆ. ಅನ್ಯಾಯವನ್ನು ಎದುರಿಸುವ ಸಾಮರ್ಥ್ಯ ಹೊಂದಬೇಕು ಎಂದರು.

ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾಳೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

ಕೂಲಿಕಾರ್ಮಿಕರು, ರೈತರು ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾದರೆ ಮಾತ್ರ ದೇಶದ ನಿಜವಾದ ಪ್ರಗತಿ ಸಾಧ್ಯ ಎಂದರು.

ಪ್ರಾಚಾರ್ಯ ಪ್ರೊ. ಎಸ್. ಜಿ. ರೊಡಗಿ ಮಾತನಾಡಿ, ಮೇಧಾ ಪಾಟ್ಕರ್‌ ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರ ಸಾಮಾಜಿಕ ಕೊಡುಗೆ ಅಪಾರ. ಅವರ ಜೀವನ ಸಾಧನೆಗಳು ಪ್ರತಿಯೊಬ್ಬ ಹೋರಾಟಗಾರಿಗೆ ಸ್ಪೂರ್ತಿಯಾಗಿವೆ. ಸಮಾಜದ, ದೇಶದ ಪ್ರಗತಿಯಲ್ಲಿ ಅವರೊಂದಿಗೆ ನಾವೂ ಕೈಜೋಡಿಸೋಣ ಎಂದರು.

ಬಿ.ಎಲ್.ಡಿ.ಇ, ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಆಡಳಿತಾಧಿಕಾರಿ ಡಾ. ಕೆ.ಜಿ.ಪೂಜಾರಿ, ವಕೀಲರಾದ ವಿದ್ಯಾ ದೇಶಪಾಂಡೆ,ಮಹಿಳಾ ವೇದಿಕೆ ಮುಖ್ಯಸ್ಥೆ ಡಾ. ಮಹಾನಂದಾ ಪಾಟೀಲ,ಡಾ. ಎಸ್. ಟಿ ಮೆರವಡೆ,ಡಾ. ಭಕ್ತಿ ಮಹಿಂದ್ರಕರ್, ಸ್ಥಳಿಯ ರೈತ, ಕಾರ್ಮಿಕ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಕಾಲೇಜು ಆವರಣದಲ್ಲಿ ಮೇಧಾ ಪಾಟ್ಕರ್‌ ಸಸಿಗಳನ್ನು ನೆಟ್ಟು ಸಂತಸ ವ್ಯಕ್ತಿಪಡಿಸಿದರು.

***

ರೈತರ ಹೋರಾಟ ನಿಲ್ಲದು: ಪಾಟ್ಕರ್‌

ವಿಜಯಪುರ: ಕೃಷಿ, ರೈತ ವಿರೋಧಿ ಕಾನೂನು ಜಾರಿಗೆ ಹವಣಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟ ನಿಲ್ಲದು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳ ವಿರುದ್ಧದ ಹೋರಾಟ ಪೂರ್ಣವಾಗಿ ನಿಂತಲ್ಲ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜ.15ರಂದು ನಡೆಯುವ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದದ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಘೋಷಣೆಯಾಗಲಿದೆ ಎಂದರು.

ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ವಿಮಾನ ನಿಲ್ದಾಣ, ಬ್ಯಾಂಕುಗಳನ್ನು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದೆ. ಇನ್ನುಳಿದ ಸಂಸ್ಥೆಗಳನ್ನು ನಿಧಾನವಾಗಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.