ADVERTISEMENT

ಕುಮಾರಸ್ವಾಮಿ ಬಂಧನಕ್ಕೆ ಒಬ್ಬ ಕಾನ್‌ಸ್ಟೆಬಲ್‌ ಸಾಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 14:56 IST
Last Updated 21 ಆಗಸ್ಟ್ 2024, 14:56 IST
   

ವಿಜಯಪುರ: ‘ನೂರು ಸಿದ್ದರಾಮಯ್ಯ ಬಂದರೂ ನನ್ನ ಬಂಧಿಸಲು ಆಗಲ್ಲ’ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನೂರು ಸಿದ್ದರಾಮಯ್ಯ ಏಕೆ ಬೇಕು, ಒಬ್ಬ ಕಾನ್‌ಸ್ಟೆಬಲ್‌ ಸಾಕು’ ಎಂದು ತಿರುಗೇಟು ನೀಡಿದರು.

‘ಕುಮಾರಸ್ವಾಮಿ ಅವರನ್ನು ಬಂಧಿಸುವುದು ಪೊಲೀಸ್ ಇಲಾಖೆಯವರೇ ಹೊರತು ನಾನಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಎಲ್ಲಿ ಅನುಮತಿ ಕೊಡುತ್ತಾರೋ ಎಂದು ಹೆದರಿ ಕುಮಾರಸ್ವಾಮಿ ತರಾತುರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ’ ಎಂದರು.

ತಿದ್ದುಪಡಿ ಮಾಡಿಲ್ಲ:

ADVERTISEMENT

‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ, ವರದಿಯಾಗಲಿ, ಪತ್ರವಾಗಲಿ ಅಥವಾ ಆದೇಶವಾಗಲಿ ಇಲ್ಲ. ಆ ಅವಧಿಯಲ್ಲಿ ಪ್ರಭಾವ ಬೀರಲು ನಾನು ಸಿಎಂ ಅಥವಾ ಮಂತ್ರಿಯಾಗಿರಲಿಲ್ಲ’ ಎಂದರು.

‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಯನ್ನು ತಿದ್ದಲು ಹೋಗಿಲ್ಲ. ನಿವೇಶನ ಹಂಚಿಕೆಯಾಗಿರುವುದು 2014ರ ಮನವಿ ಮೇರೆಗೆ ಅಲ್ಲ, 2021ರಲ್ಲಿ ಕೊಟ್ಟ ಮನವಿ ಮೇರೆಗೆ. ಆಗ ಮೂಡ ಬಿಜೆಪಿ ಕೈಯಲ್ಲಿ ಇತ್ತು. ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಮುಖ್ಯಮಂತ್ರಿ ಆಗಿದ್ದವರು ಬಸವರಾಜ ಬೊಮ್ಮಾಯಿ. ಆಗ ಆದ ನಿವೇಶನ ಹಂಚಿಕೆಗೆ ಯಾರು ಜವಾಬ್ದಾರರು. ಈ ಬಗ್ಗೆ ಆಯೋಗವನ್ನು ರಚಿಸಲಾಗಿದ್ದು, ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.