ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ 10 ಲಕ್ಷ ಕ್ಯುಸೆಕ್ ವರೆಗೂ ನೀರು ಹರಿಸಿದರೂ ಜಲಾಶಯದ ಎಡಭಾಗಕ್ಕೆ ಇನ್ನು ಮುಂದೆ ನೀರು ಪ್ರವೇಶಿಸುವುದಿಲ್ಲ. ಅಲ್ಲಿ ನದಿ ತೀರಗುಂಟ ಪ್ರವಾಹ ನಿಯಂತ್ರಣದ ತಡೆಗೋಡೆ ನಿರ್ಮಿಸಲಾಗಿದೆ.
2019ರ ಆಗಸ್ಟ್ 13 ರಂದು ಇಲ್ಲಿಯವರೆಗಿನ ಗರಿಷ್ಠ 5.70 ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಜಲಾಶಯಕ್ಕೆ ಹತ್ತಿಕೊಂಡೇ ಎಡಭಾಗಕ್ಕೆ ನೀರು ಹೊಕ್ಕು, ಪಕ್ಕದಲ್ಲಿನ ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ಹಾಗೂ ಅಣೆಕಟ್ಟು ಹಾಗೂ ಉದ್ಯಾನಗಳಿಗೆ ವಿದ್ಯುತ್ ಪೂರೈಸುವ ವಿದ್ಯುತ್ ಟ್ರಾನ್ಸಫಾರ್ಮರ್ ಗಳು ಸಂಪೂರ್ಣ ಜಲಾವೃತಗೊಂಡು ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಿತ್ತು.
5 ಲಕ್ಷ ಕ್ಯುಸೆಕ್ ನೀರು ಬಿಟ್ಟಾಗಲೂ ಈ ರೀತಿಯ ಸಮಸ್ಯೆ ಉದ್ಭವವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ತಡೆಗೋಡೆ ನಿರ್ಮಾಣಕ್ಕೆ ಕೆಬಿಜೆಎನ್ಎಲ್ ಅಧಿಕಾರಿಗಳು ನಿರ್ಧರಿಸಿದ್ದರು.
ಪ್ರವಾಹ ನಿಯಂತ್ರಣಕ್ಕಾಗಿ ಈ ತಡೆಗೋಡೆ ನಿರ್ಮಿಸಲಾಗಿದೆ. ಪ್ರವಾಸಿಗರಿಗಾಗಿ ವೀಕ್ಷಣಾ ಗ್ಯಾಲರಿ ನಿರ್ಮಿಸಬೇಕೆಂಬ ಬೇಡಿಕೆಯಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.ಎಚ್.ಎನ್. ಶ್ರೀನಿವಾಸ, ಮುಖ್ಯ ಎಂಜಿನಿಯರ್, ಅಣೆಕಟ್ಟು ವಲಯ
ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡೇ ಎಡಬದಿಯಲ್ಲಿ ಸಮುದ್ರ ಮಟ್ಟದಿಂದ 502 ಮೀಟರ್ ನಿಂದ 506 ಮೀಟರ್ ಎತ್ತರದವರೆಗೆ ಬೇರೆ ಬೇರೆ ಎತ್ತರದಲ್ಲಿ (ಅಂದಾಜು ನೆಲಮಟ್ಟದಿಂದ 2 ಮೀಟರ್ ನಿಂದ 5 ಮೀಟರ್ ಎತ್ತರದವರೆಗೆ) ಸುಮಾರು 1.35 ಕಿ.ಮೀ ಉದ್ದವಾಗಿ ತಡೆಗೋಡೆ ನಿರ್ಮಿಸಲಾಗಿದೆ.
ಜಲಾಶಯಕ್ಕೆ ಹತ್ತಿಕೊಂಡ ಸ್ಥಳದಲ್ಲಿ ಎತ್ತರವನ್ನು ಹೆಚ್ಚಿಸಲಾಗಿದ್ದು, ದೂರ ಹೋದಂತೆ ತಡೆಗೋಡೆಯ ಎತ್ತರ ಕಡಿಮೆಯಿದೆ.
ಅದಕ್ಕಾಗಿ ಕೇಂದ್ರ ಸರ್ಕಾರದ ‘ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣೆ ಯೋಜನೆ (ಡ್ರಿಪ್)' ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆದು ಈ ತಡೆಗೋಡೆ ನಿರ್ಮಿಸಲಾಗಿದೆ. ಅದಕ್ಕಾಗಿ 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
‘ಇಲ್ಲಿಯವರೆಗೆ ಜಲಾಶಯದಿಂದ ಐದು ಲಕ್ಷ ಕ್ಯುಸೆಕ್ ನೀರು ಬಿಟ್ಟರೂ ಅಕ್ಕಪಕ್ಕ ನೀರು ಹೊಕ್ಕು ಉದ್ಯಾನಗಳು ಮುಳುಗುತ್ತಿದ್ದವು. ಈಗ ತಡೆಗೋಡೆ ನಿರ್ಮಾಣದಿಂದ 10 ಲಕ್ಷ ಕ್ಯುಸೆಕ್ ವರೆಗೂ ನೀರು ಬಿಟ್ಟರೂ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.
ವೀಕ್ಷಣಾ ಗ್ಯಾಲರಿ ನಿರ್ಮಾಣಕ್ಕೆ ಒತ್ತಾಯ:
ಜಲಾಶಯವನ್ನು ಹಾಗೂ ಅದರಿಂದ ನೀರು ಧುಮಕ್ಕುವ ದೃಶ್ಯ ನೋಡಲು ಸಹಸ್ರಾರು ಪ್ರವಾಸಿಗರು ಬರುತ್ತಾರೆ. ಅವರೆಲ್ಲಾ ಜಲಾಶಯದ ಕೆಳಭಾಗದಲ್ಲಿರುವ ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ಬಳಿ ನಿಂತು ಜಲಾಶಯ ನೋಡುತ್ತಿದ್ದರು. ಆದರೆ ಈಗ ತಡೆಗೋಡೆ ನಿರ್ಮಿಸಿದ್ದರಿಂದ ಜಲಾಶಯದ ಸುಂದರ ವೈಭವ ದೃಶ್ಯ ನೋಡಲು ಅಸಾಧ್ಯ. ಜಲಾಶಯ ನೋಡಬೇಕೆಂದರೆ ಜಲಾಶಯದ ಬಲಭಾಗದ ಸೀತಮ್ಮನಗಿರಿಗೆ ತೆರಳಿ ಅಲ್ಲಿಂದ ದೂರದಿಂದ ಜಲಾಶಯವನ್ನು ವೀಕ್ಷಿಸಬೇಕು. ಹೀಗಾಗಿ ತಡೆಗೋಡೆ ಮೇಲೆಯೇ ಪ್ರವಾಸಿಗರಿಗಾಗಿ ವೀಕ್ಷಣಾ ಗ್ಯಾಲರಿ ನಿರ್ಮಿಸಬೇಕು ಎಂಬುದು ಪ್ರವಾಸಿಗರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.