ಇಂಡಿ: ಕಳೆದ 10 ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ತಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಇಂಡಿ ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ₹984 ಕೋಟಿ ವೆಚ್ಚದ 548-ಬಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ 50 ವರ್ಷದ ರಾಜಕೀಯ ಜೀವನಕ್ಕೆ ಇಂಡಿ ಜನತೆ ಜೀವ ತುಂಬಿದ್ದಾರೆ. ಅವರ ಋಣ ಮುಟ್ಟಿಸುವುದಕ್ಕಾಗಿ ನನ್ನ ಜೀವ ಒತ್ತೇ ಇಟ್ಟು ಕೆಲಸ ಮಾಡುತ್ತಿದ್ದೇನೆ’ ಎಂದರು.
‘ನಾನು ಬರೀ ಪ್ರಚಾರ ಪ್ರೀಯನಲ್ಲ. ಇಂಡಿ ಹಾಗೂ ಸಿಂದಗಿ ತಾಲ್ಲೂಕುಗಳ ರೈತರಿಗಾಗಿ ದೇವೇಗೌಡರ ಕಾಲು ಹಿಡಿದು ₹64,000 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಇಂಡಿ ಬ್ಯ್ರಾಂಚ್ ಕ್ಯಾನಲ್ ಮಾಡಿಸಿದ್ದೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಅವರ ಮೂಲಕ ವಿಜಯಪುರ ಜಿಲ್ಲೆಯ ಕೂಡಿಗಿ ಗ್ರಾಮದಲ್ಲಿ ₹42,000 ಕೋಟಿ ವೆಚ್ಚದ ಎನ್‍ಟಿಪಿಸಿ ಮಾಡಿಸಿದ್ದೇನೆ. ಇದರಿಂದಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಲಿಫ್ಟ್ ಇರಿಗೇಶನ್ ನಡೆಯುತ್ತವೆ. ಇಲ್ಲದಿದ್ದರೆ ಅವುಗಳಿಗೆ ವಿದ್ಯುತ್ ಸರಬರಾಜು ಆಗುತ್ತಿರಲಿಲ್ಲ ಎಂದರು.
ಇತ್ತೀಚೆಗೆ ಇಂಡಿ ಹಾಗೂ ಚಡಚಣ ತಾಲ್ಲೂಕುಗಳ ಸಂಪೂರ್ಣ ನೀರಾವರಿಗಾಗಿಯೇ ರೇವಣಸಿದ್ದೇಶ್ವರ ನೀರಾವರಿ ಯೋಜನೆಗೆ ₹3,000 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿಸಿದ್ದಲ್ಲದೇ ಇಂಡಿ ತಾಲ್ಲೂಕಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹200 ಕೋಟಿ ಅನುದಾನ ನೀಡಿದ್ದೇನೆ. ಇದಲ್ಲದೇ ಇಂಡಿ ಕಾಲುವೆಯ ರಿಪೇರಿಗಾಗಿ ₹2,700 ಕೋಟಿ ಅನುದಾನಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇಷ್ಟರಲ್ಲಿಯೇ ಮಂಜೂರಾತಿ ಸಿಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳಿಗಾಗಿಯೇ ಕಳೆದ 10 ವರ್ಷಗಳಲ್ಲಿ ₹3,516 ಕೋಟಿ ಅನುದಾನ ತಂದಿದ್ದೇನೆ. ಇದರಲ್ಲಿ 6 ರಾಷ್ಟ್ರೀಯ ಹೆದ್ದಾರಿಗಳಿದ್ದು, 4 ರಾಷ್ಟ್ರೀಯ ಹೆದ್ದಾರಿಗಳು ಪೂರ್ಣಗೊಂಡಿವೆ. ಇವತ್ತು ಭೂಮಿಪೂಜೆ ನಡೆಸಿರುವ ಹೆದ್ದಾರಿ ಮೊದಲು ಮುರುಮ ಪಟ್ಟಣದಿಂದ ಇಂಡಿ ತಾಲ್ಲೂಕಿನ ಝಳಕಿ ಗ್ರಾಮಕ್ಕೆ ಕೂಡಿಸಲಾಗಿತ್ತು. ಅದನ್ನು ಸಚಿವ ನಿತಿನ್ ಗಡ್ಕರಿ ಅವರ ಹತ್ತಿರ ಹೋಗಿ ಮುರುಮ ಪಟ್ಟಣದಿಂದ ಮಾಶ್ಯಾಳ, ಇಂಡಿ, ಅಥರ್ಗಾ, ನಾಗಠಾಣ, ವಿಜಯಪುರ ಪಟ್ಟಣಕ್ಕೆ ತಂದು ಕೂಡಿಸಲು ಮನವಿ ಮಾಡಿ ಅದನ್ನು ಪರಿವರ್ತಿಸಲಾಗಿದೆ. ಇದಕ್ಕೆ ₹984 ಕೋಟಿ ಅನುದಾನದ ಸುಮಾರು 102 ಕಿ.ಮೀ ಉದ್ದದ ಹೆದ್ದಾರಿ ಕಾರ್ಯ ಇಷ್ಟರಲ್ಲಿಯೇ ಕಾರ್ಯ ಪ್ರಾರಂಭಿಸಲಾಗುವುದು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಬೂಸನೂರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ.ಪಾಟೀಲ, ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ, ಚಂದ್ರಶೇಖರ ಕವಟಗಿ, ಇಂಡಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶಂಕರಗೌಡ ಪಾಟೀಲ, ಶ್ರೀಪತಿಗೌಡ ಬಿರಾದಾರ, ದೇವೇಂದ್ರ ಕುಂಬಾರ, ಶೀಲವಂತ ಉಮರಾಣಿ, ಅನೀಲಗೌಡ ಬಿರಾದಾರ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ರವಿಕಾಂತ ಬಗಲಿ, ಅಣ್ಣಪ್ಪ ಖೈನೂರ, ಸಂಜೀವ ಐಹೊಳ್ಳಿ, ಬಿ.ಎಸ್.ಪಾಟೀಲ, ಕಾಂತುಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ವಿವೇಕ ಡಬ್ಬಿ, ಉಮೇಶ ಕೋಳಕರ, ಶ್ರೀಶೈಲಗೌಡ ಬಿರಾದಾರ, ವಿರಾಜ ಪಾಟೀಲ, ಎಸ್.ಜೆ.ವಾಲೀಕಾರ, ದೇವೇಂದ್ರ ಕುಂಬಾರ, ಮಲ್ಲಿಕಾರ್ಜುನ ಕಿವಡೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.