ADVERTISEMENT

ಸಂಚಾರ ದಟ್ಟಣೆ ನಿಯಂತ್ರಿಸಿ, ಅತಿಕ್ರಮಣ ತೆರವುಗೊಳಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 15:59 IST
Last Updated 12 ಜುಲೈ 2024, 15:59 IST
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಮಹಾನಗರ ಪಾಲಿಕೆ ಮೇಯರ್‌ ಮಹೇಜಬಿನ್ ಹೊರ್ತಿ, ಉಪ ಮೇಯರ್‌ ದಿನೇಶ ಹಳ್ಳಿ, ಪಾಲಿಕೆ ಆಯುಕ್ತ ವಿಜಯ ಕುಮಾರ್‌ ಮೆಕ್ಕಳಕಿ ಶುಕ್ರವಾರ  ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಮಹಾನಗರ ಪಾಲಿಕೆ ಮೇಯರ್‌ ಮಹೇಜಬಿನ್ ಹೊರ್ತಿ, ಉಪ ಮೇಯರ್‌ ದಿನೇಶ ಹಳ್ಳಿ, ಪಾಲಿಕೆ ಆಯುಕ್ತ ವಿಜಯ ಕುಮಾರ್‌ ಮೆಕ್ಕಳಕಿ ಶುಕ್ರವಾರ  ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ವಿಜಯಪುರ: ಸ್ವಚ್ಛ, ಸುಂದರ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಬೀದಿ ಬದಿ ವ್ಯಾಪಾರಸ್ಥರಿಗೆ ವಿವಿಧೆಡೆ ವ್ಯಾಪಾರ ವಲಯ ಸ್ಥಾಪಿಸಿ ಅನುಕೂಲ ಕಲ್ಪಿಸಬೇಕು,  ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕೈಗೊಂಡು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್  ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ಮೇಯರ್‌ ಮಹೇಜಬಿನ್ ಹೊರ್ತಿ, ಉಪ ಮೇಯರ್‌ ದಿನೇಶ ಹಳ್ಳಿ, ಪಾಲಿಕೆಯ ವಿವಿಧ ಸದಸ್ಯರು ಹಾಗೂ ಪಾಲಿಕೆ ಆಯುಕ್ತ ವಿಜಯ ಕುಮಾರ್‌ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಶುಕ್ರವಾರ ಬೆಳಿಗ್ಗೆ ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಕಣಕಿ ಬಜಾರ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಐತಿಹಾಸಿಕ ಕೋಟೆ ಗೋಡೆ ಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಕಂಟಿಗಳನ್ನು ತೆರವುಗೊಳಿಸಬೇಕು, ಈ ಪ್ರದೇಶದಲ್ಲಿ ಸ್ವಚ್ಛತೆ ಕೈಗೊಂಡು ಈ ಪ್ರದೇಶದಲ್ಲಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ನಗರ ವ್ಯಾಪಾರ ವಲಯವನ್ನಾಗಿ ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು. 

ADVERTISEMENT

ಲಲಿತ್‌ ಮಹಲ್‌ ಹೋಟೆಲ್‌ ಹತ್ತಿರದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪಾಲಿಕೆಗೆ ಸಂಬಂಧಿಸಿದ ಜಾಗವನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು. ನಗರದ ಗಗನ ಮಹಲ್ ಹತ್ತಿರದ ಕಂದಕದಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಕಂದಕದ ಸುತ್ತಮುತ್ತ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅವರು ಸೂಚನೆ ನೀಡಿದರು. 

ನಗರದ ನವಬಾಗ್‌ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮುಖ್ಯ ರಸ್ತೆ ಕಾಮಗಾರಿಯನ್ನು ಕೈಗೊಂಡು ಅಭಿವೃದ್ದಿಪಡಿಸಲು ರಸ್ತೆಯಲ್ಲಿರುವ ವಿದ್ಯುತ್ ಕಂಬಗಳು ಹಾಗೂ ನೀರು ಸರಬರಾಜು ಪೈಪ್‌ಲೈನ್‍ಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಐತಿಹಾಸಿಕ ತಾಜಬಾವಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಾವಡಿಯ ಸುತ್ತಮುಲಿನ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಿ, ನಗರದ ಬುರಣಾಪುರ ಪ್ರದೇಶದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಲಾದ ಮನೆಗಳಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ  ಹಾಗೂ ನಗರದ ಸೋಲಾಪುರ ರಸ್ತೆಯ ಅಗಲೀಕರಣ ಕಾರ್ಯ ಕೈಗೊಳ್ಳುವುದರಿಂದ ಕೂಡಲೇ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನಗರದ ಎಸ್.ಎಸ್.ರಸ್ತೆ ಹಾಗೂ ನೆಹರು ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಐತಿಹಾಸಿಕ ನಗರವಾಗಿರುವುದರಿಂದ ನಗರದ ಸೌಂದರೀಕರಣಕ್ಕೆ ಸ್ಮಾರಕಗಳು ಹಾಗೂ ಸ್ಮಾರಕಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜೊತೆಗೆ ವಿವಿಧ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ವಲಯಗಳನ್ನು ಸ್ಥಾಪಿಸಬೇಕು, ಮಾರುಕಟ್ಟೆಯಲ್ಲಿನ ಸಂಚಾರ ನಿಯಂತ್ರಣಕ್ಕಾಗಿ ನಗರದ ಮುಖ್ಯ ಮಾರ್ಕೆಟ್ ಪ್ರದೇಶದಲ್ಲಿ ವಾಹನಗಳ ನಿಲುಗಡೆ ಪ್ರದೇಶಗಳನ್ನು ಗುರುತಿಸಿ ವಾಹನ ನಿಲುಗಡೆ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಅವರು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.