ವಿಜಯಪುರ: ಸಿಪಿಎಂ ಮುಖಂಡ, ರೈತ ನಾಯಕ ಭೀಮಶಿ ಕಲಾದಗಿ(86) ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.
ಸೋಮವಾರ ರಾತ್ರಿ ನಿಧನರಾದ ಭೀಮಶಿ ಕಲಾದಗಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವಿಜಯಪುರದ ಕಾಳಿಕಾನಗರದ ಅವರ ಸ್ವಗೃಹದಲ್ಲಿ ಇರಿಸಲಾಗಿತ್ತು.
ಜಿಲ್ಲೆಯ ಜನಪ್ರತಿನಿಧಿಗಳು, ರೈತ ಮುಖಂಡರು, ಕಾರ್ಮಿಕ ಮುಖಂಡರು, ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಕಲಾದಗಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಇಂಡಿ ತಾಲ್ಲೂಕಿನ ನಿಂಬಾಳದ ಅವರ ತೋಟದಲ್ಲಿ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸರ್ಕಾರಿ ಗೌರವ:
ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಭೀಮಸಿ ಕಲಾದಗಿ ಅವರು ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ರೈತರು, ಕಾರ್ಮಿಕರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಕ್ರಿಯಾಶೀಲರಾಗಿ ನಡೆಸಿದ ಹೋರಾಟದ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸುವಂತೆ ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲು ಆದೇಶ ಹೊರಡಿಸಿತು.
ಬರಿಗಾಲ ಭೀಮಶಿ:
‘ಭೀಮಸಿ ಕಲಾದಗಿ ಅವರು ಮುಳವಾಡ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ರೈತರ ಜಾಗೃತಿ ಹೋರಾಟಗಳನ್ನು ಸಂಘಟನೆಗಳನ್ನು ನಡೆಸುತ್ತಾ ಜಿಲ್ಲೆಯಲ್ಲಿ ಸದಾ ಕ್ರಿಯಾಶೀಲರಾಗಿದ್ದರು. ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳುವವರೆಗೆ ಚಪ್ಪಲಿ ಧರಿಸದೆ ಬರಿಗಾಲಲ್ಲಿ ತಿರುಗಾಡುತ್ತೇನೆ ಎಂದು ಶಪಥ ಮಾಡಿ ಬರಿಗಾಲ ಭೀಮಶಿ ಎಂದೇ ಹೆಸರಾಗಿದ್ದರು’ ಎಂದು ಸಚಿವ ಎಂ.ಬಿ.ಪಾಟೀಲ ತಮ್ಮ ಶೋಕ ಸಂದೇಶ ನೀಡಿದ್ದಾರೆ.
ಸಚಿವರ ಸಂತಾಪ:
ಕಮ್ಯುನಿಷ್ಟ್ ಮುಖಂಡ ಭೀಮಶಿ ಕಲಾದಗಿ ಅವರ ನಿಧನದಿಂದ ಜನಪರ ಕಾಳಜಿಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.
ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಶಿ ಕಲಾದಗಿ ಜಿಲ್ಲೆಯ ಮುಳವಾಡ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ನಿರಂತರವಾಗಿ ಹೋರಾಟ ಮಾಡಿದ್ದರು. ಅವರ ಅಗಲಿಗೆ ವಿಜಯಪುರ ಜಿಲ್ಲೆಗೆ ತೀವ್ರ ನಷ್ಟವನ್ನುಂಟುಮಾಡಿದೆ ಎಂದು ಹೇಳಿದರು.
ಹೋರಾಟದ ಹಾದಿಯಲ್ಲಿ ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಜನಪ್ರತಿನಿಧಿಗಳನ್ನು ಪ್ರಶ್ನೆಮಾಡಲು ಹಿಂಜರಿಯುತ್ತಿರಲಿಲ್ಲ. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ಜನಪರ ಕಾಳಜಿ ಹೋರಾಟಗಾರರಿಗೆ ಮಾದರಿ ಎಂದು ಸಚಿವರು ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.