ADVERTISEMENT

ವಿಜಯಪುರ: ಬೇಕಾಬಿಟ್ಟಿ ಆಯುಧ ಲೈಸನ್ಸ್‌ಗೆ ಕಡಿವಾಣ: ಡಿಸಿ ಸುನೀಲ್‌ಕುಮಾರ್

ಪ್ರತಿಷ್ಠೆಗಾಗಿ, ಜನರನ್ನು ಹೆದರಿಸುವ ಸಲುವಾಗಿ ಆಯುಧ ಪರವಾನಗಿ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 10:47 IST
Last Updated 19 ಆಗಸ್ಟ್ 2021, 10:47 IST
ಪಿ.ಸುನೀಲ್ ಕುಮಾರ್
ಪಿ.ಸುನೀಲ್ ಕುಮಾರ್   

ವಿಜಯಪುರ: ಪ್ರತಿಷ್ಠೆಗಾಗಿ, ಸಾಮಾನ್ಯ ಜನರನ್ನು ಹೆದರಿಸುವ ಸಲುವಾಗಿ ಜಿಲ್ಲೆಯಲ್ಲಿ ಬಹಳಷ್ಟು ಜನ ಆಯುಧ ಲೈಸನ್ಸ್ ಪಡೆಯುತ್ತಿರುವುದಕ್ಕೆ ನಿಯಮಾನುಸಾರ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಧ ಲೈಸನ್ಸ್ ಮಂಜೂರಾತಿ ನೀಡುವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹೊಸದಾಗಿ ಆಯುಧ ಲೈಸನ್ಸ್ ಮಂಜೂರಾತಿ, ಲೈಸನ್ಸ್ ನವೀಕರಣ, ಮರುನೋಂದಣಿ, ವರ್ಗಾವಣೆ ಹಾಗೂ ಮಾರಾಟ, ಹೆಚ್ಚುವರಿ ಆಯುಧ ಹೊಂದುವ ಕುರಿತ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಆಯುಧ ಲೈಸನ್ಸ್ ನೀಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ತೀರ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಆಯುಧ ಲೈಸನ್ಸ್ ಮಂಜೂರಾತಿ, ಲೈಸನ್ಸ್ ನವೀಕರಣ ಮಾಡಲು ಹಾಗೂ ಅನಗತ್ಯ ಪ್ರಕರಣಗಳಲ್ಲಿ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ ಎಂದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಇನ್ನು ಮುಂದೆ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಅವರು ಆಯುಧ ಮಂಜೂರಾತಿಗಾಗಿ ಶಿಫಾರಿಸು ಪೂರ್ವದಲ್ಲಿ ಅರ್ಜಿದಾರರ ಪೂರ್ವಚರಿತ್ರೆ ಪರಿಶೀಲಿಸಿ, ತೀರ ಅವಶ್ಯವಿದ್ದಲ್ಲಿ ಸಂದರ್ಶನ ನಡೆಸಿ, ಆಯುಧ ಪರವಾನಗಿ ಅವಶ್ಯಕತೆಯಿರುವ ವ್ಯಕ್ತಿಗೆ ಪರವಾನಗಿ ಹೊಂದಲು ಸೂಕ್ತ ಕಾರಣಗಳಿವೆಯೆಂದು ಮನಗಂಡು ಮಂಜೂರಾತಿಗಾಗಿ ಶಿಫಾರಸ್ಸು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ವರದಿ ಆಧರಿಸಿ ಸಂದರ್ಶನದ ಮೂಲಕ ಆಯುಧ ಲೈಸನ್ಸ್ ನೀಡಲಾಗುವುದು ಮತ್ತು ಲೈಸನ್ಸ್ ನವೀಕರಣ, ಮರುನೋಂದಣಿ, ವರ್ಗಾವಣೆ ಹಾಗೂ ಮಾರಾಟ, ಹೆಚ್ಚುವರಿ ಆಯುಧ ಹೊಂದಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಇದ್ದರು.

****

ಬಹುತೇಕ ಜನರಿಗೆ ಅವಶ್ಯಕತೆ ಇಲ್ಲದಿದ್ದರೂ ಆತ್ಮರಕ್ಷಣೆ ಮತ್ತು ಬೆಳಸಂರಕ್ಷಣೆ ಹಾಗೂ ಇತರೆ ಕಾರಣಗಳನ್ನು ನೀಡಿ ಆಯುಧ ಲೈಸನ್ಸ್ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ

–ಪಿ.ಸುನೀಲ್‌ ಕುಮಾರ್‌,ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.