ವಿಜಯಪುರ:ಬಹಿರಂಗ ಪ್ರಚಾರಕ್ಕೆ ಎರಡು ದಿನವಷ್ಟೇ ಬಾಕಿಯಿದೆ. ಪಕ್ಷಗಳ ದಂಡ ನಾಯಕರು ಕ್ಷೇತ್ರಕ್ಕೆ ದಾಂಗುಡಿಯಿಟ್ಟಿದ್ದಾರೆ. ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರಚಾರದ ಅಬ್ಬರ ಬಿರುಸು ಪಡೆದಿದೆ.
ಮತದಾನಕ್ಕೆ ನಾಲ್ಕು ದಿನವಷ್ಟೇ ಬಾಕಿಯಿದೆ. ಅಬ್ಬರದ ಪ್ರಚಾರದ ನಡುವೆಯೇ ಆಯಾ ಪಕ್ಷಗಳ ಪ್ರಮುಖ ನಾಯಕರು ತಂತ್ರಗಾರಿಕೆ ರೂಪಿಸಲು, ಪ್ರಚಾರದಿಂದ ತೆರೆಮರೆಗೆ ಸರಿಯಲಾರಂಭಿಸಿದ್ದಾರೆ.
ಅಖಾಡದಲ್ಲಿ ಆರೋಪ–ಪ್ರತ್ಯಾರೋಪ, ಟೀಕೆಗಳ ಸುರಿಮಳೆಯೇ ನಡೆದಿದೆ. ಪತ್ರಿಕಾಗೋಷ್ಠಿಗಳ ಮೂಲಕವೂ ವಿರೋಧಿಗಳ ಮೇಲೆ ವಾಗ್ದಾಳಿ ಬಿರುಸುಗೊಂಡಿದೆ. ಒಟ್ಟಾರೆ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಕುತೂಹಲ ಕೆರಳಿಸಿದೆ.
‘ಮತ ಸಂಘರ್ಷ..!’:
ಮತದಾನ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲೂ ಚುನಾವಣಾ ಕಾವು ಬಿಸಿಲ ಝಳಕ್ಕಿಂತಲೂ ಹೆಚ್ಚಲಾರಂಭಿಸಿದೆ. ಈ ಹಿಂದಿನ ಚುನಾವಣೆಯಲ್ಲಿದ್ದ ದಲಿತ–ಬಂಜಾರಾ ಮತ ಸಂಘರ್ಷಕ್ಕೆ, ಇದೀಗ ‘ಮೂಲ ಅಸ್ಪೃಶ್ಯ’ ಎಂಬ ಹೊಸ ಅಸ್ತ್ರ ಸೇರ್ಪಡೆಯಾಗಿದೆ.
ಬಂಜಾರಾ ಸಮುದಾಯದಲ್ಲಿ ಶಾಸಕ ದೇವಾನಂದ ಚವ್ಹಾಣರ ಕುಟುಂಬ ರಾಜಕಾರಣದ ಬಗ್ಗೆ ಆರಂಭದ ದಿನಗಳಲ್ಲಿದ್ದ ಸಿಟ್ಟು, ಸೆಡವು ಇದೀಗ ತಣಿದಿದೆ. ಸಿಕ್ಕ ಅವಕಾಶ ಸದ್ಬಳಕೆಗಾಗಿ ಸಮುದಾಯ ಮತ್ತೊಮ್ಮೆ ಒಂದಾಗಿ, ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಬೆನ್ನಿಗೆ ನಿಂತು, ಗೆಲುವಿನ ಹೋರಾಟಕ್ಕಿಳಿದ ಮರುಕ್ಷಣವೇ ಎದುರಾಳಿ ಪಾಳೆಯದಲ್ಲಿನ ಚಿತ್ರಣವೂ ಅದಲು ಬದಲಾಗಿದೆ.
‘ಪಕ್ಷ ರಾಜಕಾರಣಕ್ಕೆ ತಿಲಾಂಜಲಿ ನೀಡಿದ ದಲಿತರು, ಮೂಲ ಅಸ್ಪೃಶ್ಯ ಹೆಸರಿನಲ್ಲಿ ರಮೇಶ ಜಿಗಜಿಣಗಿ ಬೆಂಬಲಿಸಲು ಬೀದಿಗಿಳಿದಿದ್ದಾರೆ.
ಕಾಂಗ್ರೆಸ್‌ನಿಂದ ಅವಕಾಶ ವಂಚಿತರಾದ ದಲಿತ ಬಲಗೈ ಮುಖಂಡರು, ‘ಮೂಲ ಅಸ್ಪೃಶ್ಯ’ ಹೆಸರಿನಲ್ಲೇ ಎಡಗೈ ಸಮುದಾಯದ ಜತೆ ಸಹೋದರತ್ವ ಭಾವನೆಯಿಂದ ಜತೆಗೂಡಿ, ಮುಂದಡಿಯಿಡಲು ಗುರುವಾರ ವಿಜಯಪುರದಲ್ಲಿ ನಡೆದ ರಹಸ್ಯ ಸಭೆಯೊಂದರಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ನೇರವಾಗಿ ಭಾಗಿಯಾಗಲು, ಮತಗಳನ್ನು ಹಾಕಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ’ ಎಂಬುದು ವಿಶ್ವಾಸಾರ್ಹನೀಯ ಮೂಲಗಳಿಂದ ‘ಪ್ರಜಾವಾಣಿ’ಗೆ ಗೊತ್ತಾಗಿದೆ.
‘ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ಎಡಗೈ–ಬಲಗೈ ದಲಿತ ಸಮಾಜದ ಪ್ರಮುಖ ಮುಖಂಡರು ಗುರುವಾರ ವಿಜಯಪುರದಲ್ಲಿ ಒಂದೆಡೆ ಸೇರಿದ್ದರು.’
‘ನಾವು ರಮೇಶ ಜಿಗಜಿಣಗಿ ಪರ ಮತ ಚಲಾಯಿಸಿ ಎಂದು ಮನವಿ ಮಾಡಿಕೊಳ್ಳುವ ಮುನ್ನವೇ ನಮ್ಮ ಅಸ್ಮಿತೆ. ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ನಮ್ಮೊಳಗಿನ ತಿಕ್ಕಾಟ, ಭಿನ್ನಾಭಿಪ್ರಾಯ ಬದಿಗೊತ್ತಿ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಜಿಗಜಿಣಗಿ ಪರ ಎಲ್ಲೆಡೆ ಮತ ಚಲಾಯಿಸುವ ಜತೆ; ಉಳಿದ ಸಮಾಜದ ಒಡನಾಡಿಗಳಿಂದಲೂ ಮತ ಹಾಕಿಸುತ್ತೇವೆ’ ಎಂದು ತಾವೇ ಸ್ವತಃ ಘೋಷಿಸಿಕೊಂಡರು.
‘ಈ ಬೆಳವಣಿಗೆ ಬಳಿಕ ಎಲ್ಲರೂ ಒಟ್ಟಾಗಿ ಡಾಬಾದಲ್ಲಿಯೇ ಊಟ ಸವಿದೆವು. ನಂತರ ಜಮಾಯಿಸಿದ್ದ 300ಕ್ಕೂ ಹೆಚ್ಚು ಮುಖಂಡರು ತಮ್ಮೂರುಗಳಿಗೆ ಮರಳಿದರು’ ಎಂದು ಸಭೆಯ ಸಾರಥ್ಯ ವಹಿಸಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.