ADVERTISEMENT

Diwali 2024: ದೀಪಾವಳಿಗೆ ಹೂಗಳ ಮೆರುಗು

ಬಡವರ ಬದುಕಿಗೆ ಬೆಳಕಾದ ಹೂವಿನ ಮಾರಾಟ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 6:21 IST
Last Updated 2 ನವೆಂಬರ್ 2024, 6:21 IST
   

ಮುದ್ದೇಬಿಹಾಳ: ನಾಡಿನೆಲ್ಲೆಡೆ ಬೆಳಕಿನ ಹಬ್ಬ ಮೆರಗು ಪಡೆಯುವುದು ಮನೆ, ಅಂಗಡಿ ಹಾಗೂ ಕಚೇರಿಗಳಿಗೆ ಮಾಡುವ ವಿಶೇಷ ಅಲಂಕಾರದಿಂದ. ಅದರಲ್ಲೂ ಹೂವಿನ ಅಲಂಕಾರ ಹಬ್ಬದ ಕಳೆಯನ್ನು ನೂರ್ಮಡಿಗೊಳಿಸುತ್ತದೆ.

ಹೂವು ಮಹಿಳೆಯರಿಗೆ ಅಚ್ಚುಮೆಚ್ಚು. ಆದರೆ, ನೈಸರ್ಗಿಕ ಹೂವಿನ ಮಾರುಕಟ್ಟೆಯನ್ನು ಪ್ಲಾಸ್ಟಿಕ್ ಹೂವಿನ ಮಾರುಕಟ್ಟೆ ಆವರಿಸಿಕೊಂಡಿದೆ. ಕೃತಕ ಹೂವುಗಳು ಎಲ್ಲೆಡೆ ಕಾಣಸಿಗುತ್ತವೆ. ನೈಸರ್ಗಿಕವಾಗಿ ಬೆಳೆದ ಹೂವು ಖರೀದಿಗೆ ದರ ತುಸು ಹೆಚ್ಚು ಎನ್ನುವ ಕಾರಣಕ್ಕೆ ಆಲಂಕಾರಿಕ ಪ್ಲಾಸ್ಟಿಕ್ ಹೂವಿನ ಹಾರಗಳನ್ನು ಹಾಗೂ ವಿವಿಧ ಸಾಮಗ್ರಿಗಳನ್ನು ಜನರು ಖರೀದಿಸುತ್ತಿದ್ದಾರೆ.

ಬಡವರ ಬದುಕಿಗೂ ‘ಬೆಳಕು’: ಪ್ಲಾಸ್ಟಿಕ್ ಹೂವು ಮಾರಾಟ ಬಡ ಕುಟುಂಬಗಳ ಬದುಕಿಗೆ ಆಸರೆಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಅದನ್ನು ವಿವಿಧ ಆಲಂಕಾರಿಕ, ಆಟಿಕೆ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಇದರಿಂದ ಪ್ಲಾಸ್ಟಿಕ್‌ ಪುನರ್ಬಳಕೆ ಆಗುವುದರೊಂದಿಗೆ, ಉತ್ತಮ ವ್ಯಾಪಾರವೂ ಆಗುವುದರಿಂದ ಬಡ ಮಾರಾಟಗಾರರು ಒಂದಿಷ್ಟು ಆದಾಯ ಕಾಣುತ್ತಾರೆ.

ADVERTISEMENT

ಬೇಗನೆ ಬಣ್ಣ ಮಾಸದ, ವಿಶೇಷವಾಗಿ ಅಲಂಕಾರಕ್ಕೆ ಹೇಳಿ ಮಾಡಿಸಿದಂತಿರುವ ಪ್ಲಾಸ್ಟಿಕ್‌ ಹೂವುಗಳು ಜನರ ಗಮನ ಸೆಳೆಯುತ್ತವೆ.  ಮುದ್ದೇಬಿಹಾಳದ ಮಾರುಕಟ್ಟೆಯಲ್ಲಿ ಶೇ 30ಕ್ಕೂ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ಹೂವುಗಳ ಮಾರಾಟ ಕಂಡುಬರುತ್ತಿದೆ.

ಚೆಂಡು ಹೂ ಪ್ರಧಾನ: ಬೆಳಕಿನ ಹಬ್ಬದಲ್ಲಿ ವಿಶೇಷವಾಗಿರುವುದು ಚೆಂಡು ಹೂವು. ಕೃತಕ ಹೂವುಗಳು ಎಷ್ಟೇ ಚೆಂದವಾಗಿ ಕಾಣಿಸಿದರೂ ನೈಸರ್ಗಿಕವಾದ ಬೆಳೆದ ಚೆಂಡು ಹೂವಿನ ಬೇಡಿಕೆ ಚೂರೂ ಕಡಿಮೆಯಾಗಿಲ್ಲ.

ನೈಸರ್ಗಿಕ ಹೂವುಗಳ ಹಾರಕ್ಕಿಂತ ಪ್ಲಾಸ್ಟಿಕ್ ಹಾರಗಳು ನೋಡಲು ಆಕರ್ಷಕವಾಗಿದ್ದು, ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ. ಇದರಿಂದ ನಮ್ಮ ಜೀವನವೂ ಸಾಗಿದೆ. ನಮ್ಮ ಕುಟುಂಬದಿಂದ ಪ್ಲಾಸ್ಟಿಕ್‌ನ ಆಲಂಕಾರಿಕ ಸಾಮಗ್ರಿಗಳಾದ ತೋರಣ, ದೃಷ್ಟಿ ಬೊಂಬೆ, ಲಾರಿಗಳಿಗೆ ಕಟ್ಟುವ ಗೊಂಡೆಗಳನ್ನು ತಯಾರಿಸಿ ಮಾರುತ್ತೇವೆ.

- ಬಸವರಾಜ, ಪ್ಲಾಸ್ಟಿಕ್ ಹೂ ಮಾರಾಟಗಾರ

ಅಂಗಡಿ, ಕಚೇರಿಗಳಲ್ಲಿ ಪ್ಲಾಸ್ಟಿಕ್ ಹೂವುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ವರ್ಷ ವ್ಯಾಪಾರದಲ್ಲೂ ಏರಿಕೆಯಾಗುತ್ತಿದೆ. ದೀಪಾವಳಿಯಷ್ಟೇ ಅಲ್ಲದೆ ಇನ್ನಿತರ ಹಬ್ಬದಲ್ಲೂ ಬೇಡಿಕೆ ಇರುವುದರಿಂದ ನಮಗೆ ಈ ಕೆಲಸ ಆಸರೆಯಾಗಿದೆ.

- ರಾಮು, ಪ್ಲಾಸ್ಟಿಕ್ ಹೂವು ಮಾರಾಟಗಾರ, ಬಿದರಕುಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.