ಆಲಮೇಲ: ದೀಪಾವಳಿ ಪಾಡ್ಯದಿಂದ ಐದು ದಿನಗಳವರೆಗೆ ದನಗಾಹಿ ಜನಾಂಗದಲ್ಲಿ ವಿಶೇಷವಾಗಿ ಆಚರಣೆಯಲ್ಲಿರುವುದೇ ಆಣಿಪೀಣಿ.
ಜನಾಂಗದ ಯುವಕರ ತಂಡವು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರಾತ್ರಿ ಜಾನುವಾರಗಳಿರುವ ಪ್ರತಿ ಮನೆಗೂ ತೆರಳಿ ದೀಪ ಬೆಳಗುತ್ತಾರೆ. ದನಕರುಗಳ ಮುಖ್ಯ ಆಹಾರವಾದ ಹುಲ್ಲಿನಿಂದ ಹೆಡೆ ಆಕಾರದ ಗೂಡು ಮಾಡುತ್ತಾರೆ. ಬಿದಿರನ್ನು ಬಾಗಿಸಿ ಎರಡೂ ತುದಿಗಳನ್ನು ಸೇರಿಸಿ ಗೂಡಿನಾಕಾರ ದೀವಿಗೆ ಇಡುತ್ತಾರೆ. ಕೆಲವೆಡೆ ಜೋಳದ ದಂಟು ಇಲ್ಲವೇ ಬೇವಿನ ಗರಿಗಳಿಂದ ಗೂಡು ಕಟ್ಟಲಾಗುತ್ತದೆ.
ಕೆಲವೆಡೆ ಐದು, ಇನ್ನೂ ಕೆಲವೆಡೆ ಏಳು ಹೆಡೆ ಆಕಾರದ ಹುಲ್ಲಿನಗೂಡು ಮಾಡುತ್ತಾರೆ. ಇದನ್ನು ಗೊಗ್ಗೆ, ಹುಲ್ಲಿನ ಪಣತಿ ಎಂತಲೂ ಕರೆಯಲಾಗುತ್ತದೆ. ಇದರಲ್ಲಿ ಬೆಳಗುವ ದೀಪ ಇಟ್ಟು, ಅದನ್ನು ದನಕರುಗಳಿಗೂ ಬೆಳಗುವ ಕ್ರಮವಿದೆ. ಐದು ದಿನ ಐದು ಗೊಗ್ಗೆ ಮಾಡಿ ದೀಪ ಬೆಳಗುವ ಸಂಪ್ರದಾಯ ಕೆಲವೆಡೆ ನಡೆದುಕೊಂಡುಬಂದಿದೆ.
ಆರತಿ ಬೆಳಗುವಾಗ ಐದಾರು ಜನರು ರಾಗಬದ್ದವಾಗಿ ಹಾಡುತ್ತಾರೆ. ಪ್ರತಿ ಜಾನುವಾರಿಗೂ ದೀಪ ಬೆಳಗುವಾಗ ಪ್ರತ್ಯೇಕ ಹಾಡು ಹಾಡುತ್ತಾರೆ. ಎಮ್ಮೆಗೆ ಬೆಳಗುವಾಗ, ಹೋರಿಗೆ ಬೆಳಗುವಾಗ, ಆಕಳಿಗೆ ಬೆಳಗುವಾಗ, ಆಡಿಗೆ ಬೆಳಗುವಾಗ ಹೀಗೆ ಅದರ ಗುಣಗಾನ ಮಾಡುತ್ತಲೇ ಅಭಿನಂದಿಸುವ ಶೈಲಿಯಲ್ಲಿ ಹಾಡು ಮುಂದುವರೆಯುತ್ತದೆ. ಕೊನೆಯಲ್ಲಿ ‘ಆಣಿಪೀಣಿಚೆಕ್ಕ್ಯೋ’ ಎಂದು ಮುಕ್ತಾಯಗೊಳಿಸಿ ಅಲ್ಲಿಂದ ಕಿರುಕಾಣಿಕೆ ಪಡೆದು ಮುಂದಿನ ಮನೆಗೆ ಹೋಗುತ್ತಾರೆ.
ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಇಸ್ಮಾಯಿಲ್ ಮುಲ್ಲಾ, ಮಲ್ಲಪ್ಪ ತಳವಾರ ಮೊದಲಾದವರು ತಂಡಗಳನ್ನು ಕಟ್ಟಿಕೊಂಡು ಜಾನುವಾರುಗಳಿಗೆ ದೀಪ ಬೆಳಗುವ ಸಂಪ್ರದಾಯ ಪಾಲಿಸುತ್ತಾ ಬಂದಿದ್ದಾರೆ. ಜಾನುವಾರುಗಳಿಗೆ ರೋಗ ಬಾರದಂತೆ ಪ್ರಾರ್ಥಿಸ ಲಾಗುತ್ತದೆ.
‘ಎಮ್ಮಿಗಿಮ್ಮಿ ಹೆಂಗಿರಬೇಕು, ಸುರ್ಗುರ್ ಹಿಂಡಿರಬೇಕು
ಒಲಿಮ್ಯಾಗ ಇಟ್ಟಿರಬೇಕು, ಬೆಕ್ಕ ಬಂದು ಕುಡಿದಿರಬೇಕು,
ಆಯಿ ಬಂದ ಹೊಡೆದಿರಬೇಕು, ಮುತ್ಯಾ ಬಂದ ಬಿಡಿಸಿರಬೇಕು
ಆನಿಪಿನಿ ಜಾಣಗೊ, ನಮ್ಮ ಎಮ್ಮಿ ಪೀಡಾ ಹೋಗಲೋ!’
ಜಾನುವಾರು ಇರುವ ಪ್ರತಿ ಮನೆಗೆ ಹೋಗಿ, ಹೀಗೆ ಹಾಡುತ್ತ ಆರತಿ ಬೆಳಗಿ, ನಂತರ ಮುಂದಿನ ಮನೆಗೆ ಹೋಗುತ್ತಾರೆ. ಪ್ರತಿ ಮನೆಯಿಂದಲೂ ಎಣ್ಣೆಯನ್ನು ಗೊಗ್ಗೆಗೆ ಹಾಕಿಕೊಳ್ಳುತ್ತಾರೆ. ಅಲ್ಲದೆ ಆ ಮನೆಯವರು ನೀಡಿದ ಸಿಹಿ ತಿನಿಸುಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಹಣವನ್ನು ಕಾಣಿಕೆರೂಪದಲ್ಲಿ ನೀಡುತ್ತಾರೆ.
ವಿವಿಧೆಡೆ ವಿಭಿನ್ನ ಶೈಲಿ
ಆಣಿ ಪೀಣಿ ಹಾಡುಗಳು ಆಯಾ ಪ್ರದೇಶದ ವೈವಿಧ್ಯವನ್ನು ತೋರುತ್ತವೆ. ರಚನೆ ಹಾಗೂ ಹಾಡುವ ಶೈಲಿಯಿಂದಲೂ ಈ ಹಾಡುಗಳು ಭಿನ್ನವಾಗಿರುತ್ತವೆ. ಬಾಗಲಕೋಟೆಯಲ್ಲಿ ‘ಆಣಿಪೀಣಿ ಜಾವಧೋ’ ಎಂಬ ಮುಕ್ತಾಯ ನುಡಿ ಬಂದರೆ ವಿಜಯಪುರದ ಕಡೆ ‘ಆಣಿಪೀಣಿಚೆಕ್ಕ್ಯೊ’ ಎಂತಲೂ, ಕಲಬುರಗಿ ಕಡೆ ‘ಆನಿಪಿನಿ ಚೈ’ ಎಂದೂ ಹೀಗೆ ವಿವಿಧೆಡೆ ವಿವಿಧ ರೀತಿಯಲ್ಲಿ ಹಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.