ಮುದ್ದೇಬಿಹಾಳ: ಸರ್ಕಾರ ಅಂಗವಿಕಲರಿಗಾಗಿ ಕೊಡಲು ಮಂಜೂರು ಮಾಡಿರುವ ಅನುದಾನದಲ್ಲಿ ಖರೀದಿಸಿದ ತ್ರಿಚಕ್ರ ಬೈಕ್‌ಗಳು ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಇಟ್ಟಲ್ಲಿಯೇ ದೂಳು ಹಿಡಿದಿವೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಇಟ್ಟಿರುವ ಐದು ತ್ರಿಚಕ್ರ ಬೈಕುಗಳನ್ನು ವಿತರಣೆ ಮಾಡುವ ಕಾರ್ಯ ಆಗಿಲ್ಲ. ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನದಲ್ಲಿ 2023ರಲ್ಲಿ ಒಂದು ಬೈಕ್‌ಗೆ ₹ 1.20 ಲಕ್ಷದಂತೆ ಒಟ್ಟು ₹6 ಲಕ್ಷಗಳನ್ನು ಖರ್ಚು ಮಾಡಿ ಐದು ಬೈಕ್‌ಗಳನ್ನು ಖರೀದಿಸಲಾಗಿದ್ದು, ಅವುಗಳನ್ನು ವಿತರಿಸುವ ಕಾರ್ಯ ಆಗಬೇಕು.
ಒಂದು ತಿಂಗಳ ಹಿಂದೆಯೇ ಬೈಕ್‌ಗಳನ್ನು ತಾ.ಪಂ. ಕಚೇರಿ ಆವರಣದಲ್ಲಿ ಇರಿಸಲಾಗಿದ್ದು, ಅವುಗಳಿಗೆ ಇನ್ನುಳಿದ ಸಾಮಗ್ರಿ ಜೋಡಿಸುವ ಕೆಲಸ ಆಗಿಲ್ಲ. ಫಲಾನುಭವಿಗಳ ಆಯ್ಕೆಯೂ ನಡೆದಿಲ್ಲ. ತಾಲ್ಲೂಕಿನಲ್ಲಿ ಅದೇಷ್ಟೋ ಅರ್ಹ ಅಂಗವಿಕಲರು ಇದ್ದರೂ ಅವರಿಗೆ ಬಂದಿರುವ ಈ ಬೈಕ್‌ಗಳ ವಿತರಣೆ ಆಗದೇ ದೂಳು ಹಿಡಿಯುತ್ತಿವೆ.
ಬೈಕ್ ವಿತರಣೆ ಸಮಯದಲ್ಲಿ ಹೊಸ ಬೈಕ್ ರಿಪೇರಿಗೆ ಬಂದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಐದು ಬೈಕ್‌ಗಳನ್ನು ವಿತರಿಸುವ ಬದಲು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಇನ್ನಷ್ಟು ಬೈಕ್‌ಗಳು ಬರಲಿದ್ದು ಎಲ್ಲವನ್ನೂ ಒಟ್ಟುಗೂಡಿಸಿಯೇ ವಿತರಿಸಲಾಗುವುದು ಎಂಬ ಮಾತುಗಳು ಕೇಳಿ ಬಂದಿವೆ. ಸರ್ಕಾರದಿಂದ ಯಾವಾಗ ಬೈಕ್‌ಗಳನ್ನು ಕೊಡುತ್ತಾರೆಯೋ ಈಗಿರುವ ಬೈಕ್‌ಗಳು ಸುಸ್ಥಿತಿಯಲ್ಲಿರುತ್ತವೆಯೋ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂಬುದು ಅಂಗವಿಕಲರ ಪರ ಸಂಘಟನೆಗಳ ದೂರು.
‘ಇದೊಂದು ರೀತಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ. ಹಿಂದಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಅವಧಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ 33 ಬೈಕ್‌ಗಳು ವಿಜಯಪುರದ ಶೋರೂಂ ಒಂದರಲ್ಲಿ ಎರಡು ವರ್ಷಗಳಿಂದ ಹಾಗೆ ನಿಂತುಕೊಂಡಿವೆ.185 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಅರ್ಹರನ್ನು ಆಯ್ಕೆ ಮಾಡಿ ಬೈಕ್ ವಿತರಣೆ ಮಾಡುವ ಹಂತದಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ವಿತರಣೆ, ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರು’ ಎಂದು ಅಂಗವಿಕಲರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಘಾಟಿ ದೂರಿದರು.
‘ಈಗಿನ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಈ ಬಗ್ಗೆ ಎರಡ್ಮೂರು ಬಾರಿ ಗಮನಕ್ಕೆ ತಂದಿದ್ದೇವೆ. ಆಯ್ಕೆ ಮಾಡೋಣ ಎಂದು ಹೇಳುತ್ತಿದ್ದಾರೆ ಆದರೆ ಈವರೆಗೂ ಆಗಿಲ್ಲ. ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಬಂದಿರುವ ಬೈಕ್‌ಗಳ ಅರ್ಜಿ ಸ್ವೀಕಾರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ’ ಎಂದರು.
ಅಂಗವಿಕಲರಿಗೆ ಬೈಕ್ ವಿತರಣೆ ಕಾರ್ಯ ವಿಳಂಬವಾಗಿದೆ. ಫಲಾನುಭವಿಗಳ ಆಯ್ಕೆಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಆದಷ್ಟು ಬೇಗ ವಿತರಿಸಲು ಕ್ರಮ ಕೈಗೊಳ್ಳುತ್ತೇವೆನಿಂಗಪ್ಪ ಮಸಳಿ ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.