ವಿಜಯಪುರ: ಶಾಸಕ ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಏಳು ತಿಂಗಳು ಗತಿಸಿದರೂ ಉಪಚುನಾವಣೆ ನಡೆಯದ ಪರಿಣಾಮರಾಜಕೀಯ ಪಕ್ಷಗಳು, ಅಭ್ಯರ್ಥಿ, ಆಕಾಂಕ್ಷಿಗಳಲ್ಲಿ ಉತ್ಸಾಹ ಕುಂದತೊಡಗಿದೆ.
ಶಾಸಕರಿಲ್ಲದ ಕಾರಣ ಕ್ಷೇತ್ರದ ಅಭಿವೃದ್ಧಿಗೆ ಹಿನ್ನೆಡೆಯಾಗುವ ಜೊತೆಗೆ ಜನರ ಅಹವಾಲು ಆಲಿಸುವವರಿಲ್ಲದೇ ಕ್ಷೇತ್ರ ಅನಾಥವಾಗಿದೆ.
ಪ್ರಸಕ್ತ ಸಾಲಿನ ವಿಧಾನಸಭಾ ಅವಧಿ ಮುಗಿಯಲು ಕೇವಲ 18 ತಿಂಗಳು ಮಾತ್ರ ಬಾಕಿ ಇರುವುದರಿಂದ ಈ ಅಲ್ಪಾವಧಿಗಾಗಿ ಚುನಾವಣೆ ಎದುರಿಸಲು ಆಕಾಂಕ್ಷಿಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಮೊದಲಿನ ಹುಮ್ಮಸ್ಸು ಕಂಡುಬರುತ್ತಿಲ್ಲ.
ಕೋವಿಡ್ ಕಾರಣಕ್ಕೆ ಡಿಸೆಂಬರ್ ವರೆಗೂ ಯಾವುದೇ ಚುನಾವಣೆ ನಡೆಸುವುಲ್ಲ ಎಂದು ಈ ಮೊದಲು ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಆದರೆ, ಕಲಬುರ್ಗಿ, ಬೆಳಗಾವಿ ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯನ್ನು ನಡೆಸತೊಡಗಿದೆ.
ಮಸ್ಕಿ, ಬೀದರ್ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ನಲ್ಲಿ ನಡೆದ ಉಪ ಚುನಾವಣೆ ವೇಳೆಯೇ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಚುನಾವಣಾ ಆಯೋಗ ನಡೆಯಲಿಲ್ಲ.
ರಾಜ್ಯದ ಮೂರು ಮಹಾನಗರ ಪಾಲಿಕೆ ಚುನಾವಣೆ ಬಳಿಕ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ರಾಜಕೀಯ ಪಕ್ಷಗಳಲ್ಲಿದೆ.
ಪಕ್ಷಗಳ ಚುನಾವಣೆ ಸಿದ್ಧತೆ ಸ್ಥಗಿತ
ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಎದುರಿಸಲು ಈಗಾಗಲೇ ಏಪ್ರಿಲ್‌ನಲ್ಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರಥಮ ಹಂತದ ಸಿದ್ಧತೆ ನಡೆಸಿದ್ದವು. ಆದರೆ, ಚುನಾವಣೆ ಘೋಷಣೆಯಾಗದ ಕಾರಣ ರಾಜಕೀಯ ಚುಟುವಟಿಕೆಗಳು ಸ್ಥಗಿತವಾದವು.
‘ಕೈ’ ಅಭ್ಯರ್ಥಿ ಘೋಷಣೆ:
ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ, ಪಕ್ಷದ ಟೆಕೆಟ್ ಆಕಾಂಕ್ಷಿಗಳು ಮನಗೂಳಿ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದಕ್ಕೆ ವಿರೋಧ ದಾಖಲಿಸಿದ್ದಾರೆ. ಅಲ್ಲದೇ, ಅಭ್ಯರ್ಥಿ ಬದಲಾವಣೆ ಸಂಬಂಧತೆರೆಮರೆಯಲ್ಲಿಪ್ರಯತ್ನಗಳು ನಡೆದಿವೆ.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರದಲ್ಲಿ ಸಭೆ, ಸಮಾವೇಶಗಳನ್ನು ನಡೆಸಿ ಪಕ್ಷದ ಪರವಾಗಿ ಒಂದು ಸುತ್ತಿನ ಪ್ರಚಾರವನ್ನು ನಡೆಸಿದ್ದಾರೆ. ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಮತ್ತು ಉಳಿದ ಮುಖಂಡರು ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ, ಜೆಡಿಎಸ್ ಗೊಂದಲ:
ಆಡಳಿತರೂಢ ಬಿಜೆಪಿ ಮತ್ತು ಜೆಡಿಎಸ್ ಸಿಂದಗಿ ಕ್ಷೇತ್ರದ ಉಪ ಚುನಾವಣೆಗೆ ಇದುವರೆಗೆ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಬಿಜೆಪಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆಯಾದರೂ ಇನ್ನೂ ಅಂತಿಮವಾಗಿಲ್ಲ. ಬಿಜೆಪಿಯಲ್ಲೂ ಮೂರ್ನಾಲ್ಕು ಆಕಾಂಕ್ಷಿಗಳು ಲಾಭಿ ನಡೆಸಿದ್ದಾರೆ.
ಜೆಡಿಎಸ್ ಕೂಡ ಇದುವರೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉಪಚುನಾವಣೆಗೆ ಪಕ್ಷ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ಸಹ ಈ ಹಿಂದೆ ನೀಡಿದ್ದರು. ಹೀಗಾಗಿ ಆ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅನುಮಾನಗಳಿವೆ. ಆದರೆ, ಇಂಡಿ ಕ್ಷೇತ್ರದಲ್ಲಿ ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದ ರವಿಕಾಂತ ಪಾಟೀಲ ಅವರು ಜೆಡಿಎಸ್ ಸೇರ್ಪಡೆಯಾಗಿದ್ದು, ಅವರು ಸಿಂದಗಿ ಕ್ಷೇತ್ರದಿಂದ ಸ್ಪಂದಿಸುವ ಸಾಧ್ಯತೆ ದಟ್ಟವಾಗಿದೆ.
* ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂಶಾಸಕರಿಲ್ಲ ಎಂಬ ಅನಾಥ ಪ್ರಜ್ಞೆ ಹೋಗಲಾಡಿಸಲು ಆದಷ್ಟು ಬೇಗ ಸಿಂದಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದು ಸೂಕ್ತ
–ಆರ್.ಎಸ್. ಪಾಟೀಲ ಕುಚಬಾಳ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ, ವಿಜಯಪುರ
* ಹಾಲಿ ವಿಧಾನಸಭಾ ಅವಧಿ ಮುಗಿಯಲು ಕೇವಲ 18 ತಿಂಗಳು ಬಾಕಿ ಇದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆದಷ್ಟು ಶೀಘ್ರ ಚುನಾವಣೆ ನಡೆಯುವುದು ಉತ್ತಮ
–ಪ್ರೊ.ರಾಜು ಅಲಗೂರ, ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕ, ವಿಜಯಪುರ
* ತೆರವಾದ ಸ್ಥಾನಕ್ಕೆ ಆರು ತಿಂಗಳ ಒಳಗಾಗಿ ಉಪ ಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಕೋವಿಡ್ ಸ್ಥಿತಿಗತಿ ನೋಡಿಕೊಂಡು ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಬೇಕು
–ಮಲ್ಲಿಕಾರ್ಜುನ ಯಂಡಿಗೇರಿ, ಅಧ್ಯಕ್ಷ, ಜೆಡಿಎಸ್ ಜಿಲ್ಲಾ ಘಟಕ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.