ADVERTISEMENT

ವಕ್ಫ್ ಗೆಜೆಟ್‌ ಅಧಿಸೂಚನೆ ರದ್ದತಿಗೆ ಆಗ್ರಹ: ಶೋಭಾ, ಯತ್ನಾಳ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 15:29 IST
Last Updated 4 ನವೆಂಬರ್ 2024, 15:29 IST
<div class="paragraphs"><p> ಶೋಭಾ, ಯತ್ನಾಳ ಅಹೋರಾತ್ರಿ ಧರಣಿ</p></div>

ಶೋಭಾ, ಯತ್ನಾಳ ಅಹೋರಾತ್ರಿ ಧರಣಿ

   

ವಿಜಯಪುರ: ವಕ್ಪ್ ಕಾಯ್ದೆ ರದ್ದುಪಡಿಸಬೇಕು, ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಹಾಗೂ 1974ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಮೀಪ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರದಿಂದ ಆಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು. 

ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ರಾಜ್ಯ ಸರ್ಕಾರ ವಕ್ಫ್‌ ಬೋರ್ಡ್‌ ಮೂಲಕ ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್ ಪಡೆಯಬೇಕು, ರೈತರ ಆಸ್ತಿಯ ಪಹಣೆಯಲ್ಲಿ ನಮೂದಿಸಿರುವ ವಕ್ಫ್‌ ಹೆಸರನ್ನು ತೆಗೆಯಬೇಕು, ವಕ್ಫ್ ಗೆ ಸಂಬಂಧಿಸಿದ 1974ರ ಗೆಜೆಟ್ ಅಧಿಸೂಚನೆ ರದ್ದು ಮಾಡಬೇಕು, 1974ರ ಬಳಿಕ ಬಂದಿರುವ ಎಲ್ಲ ವಕ್ಪ್ ಸಂಬಂಧಿಸಿದ ರಾಜ್ಯಪತ್ರ ರದ್ದು ಪಡಿಸಬೇಕು, ಸಚಿವ ಜಮೀರ್ ಅಹಮದ್‌ ನಡೆಸುತ್ತಿರುವ ವಕ್ಫ್‌ ಅದಾಲತ್ ತಕ್ಷಣ ನಿಲ್ಲಿಸಬೇಕು ಹಾಗೂ ಮುಖ್ಯಮಂತ್ರಿಗಳು ಈ ಕೂಡಲೇ ಅವರ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಚುನಾವಣೆ ಕಾರಣಕ್ಕೆ ವಕ್ಫ್‌ ನೀಡಿರುವ ನೋಟಿಸ್ ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಚುನಾವಣೆ ಬಳಿಕ ಮತ್ತೆ ಇದರಿಂದ ತೊಂದರೆ ಆಗಲಿದೆ, ವಕ್ಫ್‌ ಎಂಬ ಕತ್ತಿ ರೈತರ ತಲೆ ಮೇಲೆ ತೂಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು

‘ವಕ್ಫ್‌ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ನಾಡಿನ  ಮಠಾಧೀಶರು ಪಾಲ್ಗೊಳ್ಳಬೇಕು, ರೈತರ ಬೆಂಬಲಕ್ಕೆ ನಿಲ್ಲಬೇಕು, ಇಲ್ಲದಿದ್ದರೇ ಮಠ ಬಿಟ್ಟು ಹೋಗಬೇಕಾದ ಸ್ಥಿತಿ ಬರಲಿದೆ. ಜೋಳ, ಕಾಳ ಕೊಡುವವರು ಹಿಂದೂ ರೈತರೇ ಹೊರತು, ಮುಸ್ಲಿಮರಲ್ಲ’ ಎಂದರು.

ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ ಜಿಗಜಿಣಗಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಆರ್‌.ಎಸ್‌.ಪಾಟೀಲ ಕೂಚಬಾಳ, ವಿಜುಗೌಡ ಪಾಟೀಲ, ದಯಾಸಾಗರ ‍ಪಾಟೀಲ, ಕೊಲ್ಹಾಪುರ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಧರಣಿಯಲ್ಲಿ ಪಾಲ್ಗೊಂಡು, ಬೆಂಬಲ ಸೂಚಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್, ರೈತರಿಗೆ, ದೇವಸ್ಥಾನಕ್ಕೆ, ಮಠಗಳಿಗೆ ವಕ್ಪ್ ಬೋರ್ಡ್ ನಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.