ವಿಜಯಪುರ: ಬಸವ ತತ್ವ ಅನುಯಾಯಿಗಳ ಭಾವನೆಗೆ ಧಕ್ಕೆ ತರುವ ‘ವಚನ ದರ್ಶನ’ ಕೃತಿ ಮುಟ್ಟುಗೋಲು ಹಾಕುವುದು ಮತ್ತು ಶರಣ ಸಂಸ್ಕೃತಿಗೆ ಅಪಮಾನ ಮಾಡುವಂತಹ ‘ಶರಣರ ಶಕ್ತಿ’ ಚಲನಚಿತ್ರ ನಿಷೇಧಿಸುವಂತೆ ಆಗ್ರಹಿಸಿ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಕಲಬುರ್ಗಿ ಫೌಂಡೇಶನ್ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಶಶಿಕಾಂತ ಪಟ್ಟಣ ಮಾತನಾಡಿ, ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ‘ವಚನ ದರ್ಶನ’ ಕೃತಿ ರಚಿಸಿದ್ದಾರೆ. ಇದು ಲಿಂಗಾಯತ ಸಮಾಜ ಮತ್ತು ಬಸವ ಅನುಯಾಯಿಗಳ ದಿಕ್ಕು ತಪ್ಪಿಸುವ ಕೃತಿಯಾಗಿದೆ ಎಂದರು.
‘ವಚನ ಸಾಹಿತ್ಯದಲ್ಲಿ ಕಾಯಕ, ಕೃಷಿ, ಆರ್ಥಿಕತೆ, ಸಂಸ್ಕೃತಿ ಹಾಗೂ ಸಾಮಾಜಿಕ ಸಮಾನತೆ ಸಾರಲಾಗಿದೆ. ಜಗತ್ತಿಗೆ ಬೆಳಕು ನೀಡುವ ಸಾಹಿತ್ಯ ವಚನಸಾಹಿತ್ಯ, ಇದನ್ನು ವಿಕೃತ ಮನಸ್ಥಿತಿಯವರು ವಿರೂಪಗೊಳಿಸಿ ಸಮಾಜಕ್ಕೆ ವಚನ ಸಾಹಿತ್ಯದ ಬಗ್ಗೆ ತಪ್ಪು ಹಾಗೂ ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಸರ್ಕಾರ ಅದನ್ನು ತಡೆದು ವಚನ ಸಾಹಿತ್ಯವನ್ನು ಉಳಿಸಬೇಕು’ ಎಂದರು.
ಶರಣರ ಅಭಿವ್ಯಕ್ತಿಗೆ ಕಳಂಕ ತರುವ, ಬಸವ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವ ವಚನ ದರ್ಶನ ಕೃತಿಯನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸಿದರು.
ಶರಣ ಸಂಸ್ಕೃತಿಗೆ ಅಪಮಾನ ಮಾಡುವಂತೆ ಚಿತ್ರಿಕರಿಸಿರುವ ‘ಶರಣ ಶಕ್ತಿ’ ಚಲನಚಿತ್ರ ಪ್ರದರ್ಶನಕ್ಕೆ ಸರ್ಕಾರ ನಿಷೇಧ ಹೇರಬೇಕು. ಈ ಸಿನೆಮಾ ಮೂಲಕ ಬಸವಣ್ಣನವರ ಚರಿತ್ರೆಗೆ ಕಪ್ಪು ಮಸಿ ಬಳೆಯುವ ಹುನ್ನಾರ ನಡೆಸಗಿದೆ. ಶರಣರ ಬದುಕನ್ನು ಕ್ರೌರ್ಯದಿಂದ, ಅನಾಗರಿಕ ಸಂಭಾಷಣೆಯಿಂದ ಚಿತ್ರಿಕರಿಸಲಾಗಿದೆ ಎಂದು ಆರೋಪಿಸಿದರು.
‘ಶರಣ ಶಕ್ತಿ’ ಸಿನೆಮಾದ ಕಲೆ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವುಗಳನ್ನು ಸರ್ಕಾರ ತಗೆದಾಕಲು ಸೂಚಿಸಬೇಕು. ಶರಣರಿಗೆ ಅಪಮಾನ ಮಾಡುತ್ತಿರುವರ ವಿರುದ್ಧ ಸರ್ಕಾರ ಸೊಮೋಟೊ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಲಬುರ್ಗಿ ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಪ್ರಭುಗೌಡ ಪಾಟೀಲ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ಸಾಲಿ, ಗಂಗಾಧರ ಸಾಲಕ್ಕಿ, ಬಿ.ಎಂ. ಬಿರಾದಾರ, ಅನೀಲ ಹೊಸಮನಿ, ಸರಸ್ವತಿ ಪಾಟೀಲ, ಶಾರದಾಮಣಿ ಹುಣಶ್ಯಾಳ, ಮೀನಾಕ್ಷಿ ಪಾಟೀಲ, ಶಾರದಮ್ಮ ಪಾಟೀಲ, ಗೌರಮ್ಮ ನಾಶಿ, ಬಸಮ್ಮ ಭರಶೆಟ್ಟಿ, ಶೈಲಾ ಮಣೂರ, ಸಂಗಪ್ಪ ಪಡನಾಡ, ಕರ್ನೆಲ್ ಸಂಗಪ್ಪ, ವಿ.ಎ. ಪಾಟೀಲ್, ಶಕುಂತಲಾ ಚಿಂತಾಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.