ವಿಜಯಪುರ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡಲು ಆಗ್ರಹಿಸಿಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದಗೆ ಮನವಿ ಸಲ್ಲಿಸಿದರು.
ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ವಿ.ಎ.ಪಾಟೀಲ ಮಾತನಾಡಿ, ‘ದೇಶದಲ್ಲಿಯೇ ನಾವೇ ಮೊದಲು’ ಎಂಬ ಹುಸಿ ಹೆಗ್ಗಳಿಕೆಗೆ ಹಾಗೂ ಕೇಂದ್ರ ಸರ್ಕಾರದ ನೇತಾರರನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಚರ್ಚೆ, ಸಂವಾದಗಳನ್ನು ಮಾಡದೇ, ಅನುಷ್ಠಾನದ ರೂಪುರೇಷೆಗಳನ್ನು ರೂಪಿಸದೇ ಮತ್ತು ಪೂರ್ವ ತಯಾರಿಯಿಲ್ಲದೇ ಕೋವಿಡ್ ಸಂಕಷ್ಟ ಕಾಲದಲ್ಲಿ ಏಕಾಏಕಿ ಎನ್.ಇ.ಪಿ ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿದರು.
ಎನ್.ಇ.ಪಿ ಹಠಾತ್ ಜಾರಿಯಿಂದ ಆಗಿರುವ ಹಾಗೂ ಇನ್ನೂ ಆಗುತ್ತಲಿರುವ ತೊಂದರೆಗಳು, ಗೊಂದಲಗಳು ಒಂದೆರಡಲ್ಲ. ಇಡೀ ಉನ್ನತ ಶಿಕ್ಷಣವನ್ನು ಅರಾಜಕ ಸ್ಥಿತಿಗೆ ದೂಡಿದ್ದಾರೆ ಎಂದರು.
ಸಂಖ್ಯಾಶಾಸ್ತ್ರ ಇಲಾಖೆಯ ನಿವೃತ್ತ ಜಂಟಿ ಅಧಿಕಾರಿ ಸಿ.ಬಿ.ಪಾಟೀಲ ಮಾತನಾಡಿ, ಎನ್.ಇ.ಪಿ.ಯು ಶಿಕ್ಷಣದಲ್ಲಿ ಐತಿಹಾಸಿಕ ಕ್ರಾಂತಿ ಎಂಬಂತೆ ಹೆಣೆದ ಸುಳ್ಳಿನ ದಂತಕತೆಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ ಎಂದು ದೂರಿದರು.
ಇತಿಹಾಸ ಮತ್ತು ಶಿಕ್ಷಣವನ್ನು ಪಕ್ಷಗಳ ಮತ್ತು ಸರ್ಕಾರಗಳ ಸಿದ್ಧಾಂತಗಳಿಗೆ ತಕ್ಕಂತೆ ತಿರುಚುವುದು ನಾಗರಿಕತೆಯ ವಿರುದ್ಧ ನಡೆಸುವ ಅಪರಾಧವಲ್ಲದೆ ಇನ್ನೇನೂ ಅಲ್ಲ ಎಂದರು.
ನಿವೃತ್ತ ನೌಕರ ಎಸ್. ಎಸ್ ಬಣಜಿಗೇರ ಮಾತನಾಡಿ, ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯ ನೆಪದಲ್ಲಿ ರಾಜ್ಯ ಸರ್ಕಾರವು ಸತ್ಯಗಳನ್ನು ತಿರುಚಿ, ಪ್ರಗತಿವಿರೋಧಿ ಚಿಂತನೆಯನ್ನು ಪಠ್ಯಪುಸ್ತಕದ ಮೂಲಕ ಪ್ರಚಾರ ಮಾಡಲು ಪ್ರಯತ್ನಿಸುತ್ತಿದೆ. ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಕುಂಠಿತಗೊಳಿಸಿ ಕೋಮುದ್ವೇಷದ ವಿಷಬೀಜಗಳನ್ನು ಬಿತ್ತಲು, ಏಕತೆ ಮತ್ತು ಕೋಮು ಸೌಹಾರ್ದತೆ ಹಾಳು ಮಾಡುವುದೇ ಸರ್ಕಾರ ಉದ್ದೇಶವಾಗಿದೆ ಎಂದರು.
ಪ್ರಗತಿಪರ ಸಂಘಟನೆ ಮುಖಂಡ ಅಕ್ರಮ ಮಾಶಾಳಕರ ಮಾತನಾಡಿ, ಶಿಕ್ಷಣದಲ್ಲಿ ಶುಲ್ಕ ಹೆಚ್ಚಳ, ಮೂಲಭೂತ ಸೌಲಭ್ಯಗಳ ಕೊರತೆ, ಕೊಠಡಿ, ಬೋಧಕ ಸಿಬ್ಬಂದಿ, ಗ್ರಂಥಾಲಯ, ಪ್ರಯೋಗಾಲಯಗಳು ಇಲ್ಲ. ಇಂಥ ಕನಿಷ್ಠ ಸಮಸ್ಯೆಗಳನ್ನು ಬಗೆ ಹರಿಸುವುದನ್ನು ಬಿಟ್ಟು ಅನಾವಶ್ಯಕ ಹೊಸ ನೀತಿ ಜಾರಿಗೊಳಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಕಾರ್ಯದರ್ಶಿಎಚ್.ಟಿ.ಭರತಕುಮಾರ್,ಚಂದ್ರಶೇಖರ್ ಗಂಟೆಪ್ಪಗೊಳ ಮತ್ತು ಎಸ್.ಎ.ಬಿರಾದಾರ, ಬಿ.ಎನ್. ಬಿರಾದಾರ, ಬಾಬುರಾವ್ ಬೀರಕಬ್ಬಿ, ಅಕ್ರಂ ಮಾಶಾಳಕರ, ದಸ್ತಗೀರ ಉಕ್ಕಲಿ, ನಿರ್ಮಲಾ ಹೊಸಮನಿ ಇದ್ದರು.
***
ಎನ್.ಇ.ಪಿ.ಯು ಅಪ್ರಜಾಸತ್ತಾತ್ಮಕ, ಅವೈಜ್ಞಾನಿಕ, ಶಿಕ್ಷಣವಿರೋಧಿ, ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಕ ವಿರೋಧಿ ನೀತಿಯಾಗಿದೆ
ಪ್ರೊ.ವಿ.ಎ.ಪಾಟೀಲ, ಅಧ್ಯಕ್ಷ,ಜಿಲ್ಲಾ ಘಟಕ, ಶಿಕ್ಷಣ ಉಳಿಸಿ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.