ADVERTISEMENT

ಏಳನೇ ವೇತನ ಪರಿಷ್ಕರಣೆ ಜಾರಿಗೆ ಆಗ್ರಹ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 16:06 IST
Last Updated 19 ಜೂನ್ 2024, 16:06 IST
ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವಿಜಯಪುರ ಜಿಲ್ಲಾ ಸಮಿತಿಯಿಂದ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು 
ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವಿಜಯಪುರ ಜಿಲ್ಲಾ ಸಮಿತಿಯಿಂದ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು    

ವಿಜಯಪುರ: ಏಳನೇ ವೇತನ ಪರಿಷ್ಕರಣೆ ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಸೇರಿದಂತೆ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಜೀಬಿ ಮಾತನಾಡಿ, ಏಳನೇ ವೇತನ ಪರಿಷ್ಕರಣೆ ಜಾರಿ, ಹಳೆಯ ನಿಶ್ಚಿತ ಪಿಂಚಣಿ ಮರುಸ್ಥಾಪನೆ, 2.60 ಲಕ್ಷ ಖಾಲಿ ಹುದ್ದೆಗಳ ಭರ್ತಿ ಹಾಗೂ ಹೊರಗುತ್ತಿಗೆ ನೌಕರರಿಗೆ ಕೆಲಸದ ಭದ್ರತೆ ಒದಗಿಸಬೇಕು ಎಂದು 

ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.12 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.60 ಲಕ್ಷದಷ್ಟಿದೆ. ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ಹಾಲಿ ನೌಕರರ ಮೇಲೆ ಬಿದ್ದಿದೆ ಎಂದು ಆರೋಪಿಸಿದರು.

ADVERTISEMENT

ಹಲವಾರು ವರ್ಷಗಳಿಂದ ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿರುವುದಿಲ್ಲವಾದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ. ಜೇಷ್ಠತಾ ಪಟ್ಟಿ ಸಿದ್ದಪಡಿಸಿ ಪದೋನ್ನತಿ ನೀಡಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಗೌರವಾಧ್ಯಕ್ಷ ಚಂದ್ರಶೇಖರ ಎಚ್. ಲೆಂಡಿ ಮಾತನಾಡಿ, ಹೊಸ ಪಿಂಚಣಿ ವ್ಯವಸ್ಥೆಯಿಂದಾಗಿ ಸರ್ಕಾರಿ ನೌಕರರಿಗೆ ಯಾವುದೇ ನಿಶ್ಚಿತ ಪ್ರಮಾಣದ ಪಿಂಚಣಿ ಸಿಗದೇ ಸಂಧ್ಯಾಕಾಲದಲ್ಲಿ ನೌಕರರ ಬದುಕು ಬೀದಿಗೆ ಬಿದ್ದಂತಾಗಿದೆ. ನೌಕರರು ಮತ್ತು ಸರ್ಕಾರಗಳ ವಂತಿಕೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಭದ್ರತೆ ಒದಗಿಸಲು ತೊಡಗಿಸಿದಂತಾಗಿದೆ. ಆದ್ದರಿಂದ, ಎನ್.ಪಿ.ಎಸ್ ಪದ್ದತಿ ರದ್ದುಪಡಿಸಿ, ಹಳೆಯ ನಿಶ್ಚಿತ ಪಿಂಚಣಿ ವ್ಯವಸ್ಥೆ ಮರುಸ್ಥಾಪಿಸಲು ಸರ್ಕಾರವು ಆಶ್ವಾಸನೆ ನೀಡಿರುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ  ಅಶೋಕ ಇಳಕಲ್ ಮಾತನಾಡಿ, ಮನೆ ಬಾಡಿಗೆ ಭತ್ಯೆ, ಪ್ರಭಾರ ಭತ್ಯೆ, ಅಂಗವಿಕಲ ನೌಕರರ ಭತ್ಯೆ, ಸಮವಸ್ತ್ರ ಭತ್ಯೆ, ಕುಟುಂಬ ಯೋಜನೆ ಭತ್ಯೆಯನ್ನು ಬೆಲೆಯೇರಿಕೆ ಮಟ್ಟಕ್ಕನುಗುಣವಾಗಿ ಹೆಚ್ಚಿಸಬೇಕಿದೆ ಎಂದು ಹೇಳಿದರು.

ಮಹಿಳಾ ಸಂಚಾಲಕಿ ದಾಕ್ಷಾಯಿಣಿ ಹುಡೇದ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳಲ್ಲಿ ಲಕ್ಷಾಂತರ ಯುವಜನತೆ ಯಾವುದೇ ಸೇವಾ ಭದ್ರತೆಯಾಗಲಿ, ಕನಿಷ್ಠ ವೇತನವಾಗಲಿ, ಕಾನೂನುಬದ್ದವಾಗಿ ನೀಡಬೇಕಾದ ಇ.ಎಸ್.ಐ, ಪಿ.ಎಫ್ ಸೌಲಭ್ಯಗಳಾಗಲಿ, ಮಾಸಿಕ ವೇತನ ಸರಿಯಾದ ದಿನಾಂಕಕ್ಕೆ ನೀಡುವುದಾಗಲೀ ಇದಾವುದೂ ಇಲ್ಲದೇ, ಹೊರಗುತ್ತಿಗೆ ನೌಕರರು ಆಧುನಿಕ ಜೀತಪದ್ದತಿಯಂತೆ ಹೊರಗುತ್ತಿಗೆ ಏಜೆನ್ಸಿಗಳ ಕಪಿಮುಷ್ಟಿಗೆ ಸಿಲುಕಿ ನರಳುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.