ADVERTISEMENT

ಮುದ್ದೇಬಿಹಾಳ: 5 ತಿಂಗಳಲ್ಲಿ 25 ಡೆಂಗಿ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:07 IST
Last Updated 27 ಜೂನ್ 2024, 16:07 IST
ಮುದ್ದೇಬಿಹಾಳದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕೆಡಿಪಿ ಸಭೆ ಜರುಗಿತು
ಮುದ್ದೇಬಿಹಾಳದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕೆಡಿಪಿ ಸಭೆ ಜರುಗಿತು   

ಮುದ್ದೇಬಿಹಾಳ: ಜನವರಿಯಿಂದ ಮೇ ಅಂತ್ಯದ ವರೆಗೆ 110 ಪ್ರಕರಣಗಳಲ್ಲಿ 25 ಡೆಂಗಿ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಪ್ರವೀಣ ಸುಣಕಲ್ ತಿಳಿಸಿದರು.

ಪಟ್ಟಣದ ತಾ.ಪಂ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಇಲಾಖೆಯ ಪ್ರಗತಿಪರಿಶೀಲನೆ ವರದಿ ಪ್ರಸ್ತಾಪಿಸಿ ಮಾತನಾಡಿದ ಅವರು, ತಾಳಿಕೋಟಿ, ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಒಟ್ಟು 54 ಪ್ರಕರಣಗಳನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 10 ಪ್ರಕರಣಗಳು ಚಿಕುನ್‌ಗುನ್ಯಾ ಎಂದು ದೃಢಪಟ್ಟಿವೆ. ತಾಳಿಕೋಟಿ ತಾಲ್ಲೂಕಿನ ಮಡಿಕೇಶ್ವರದ ಒಂದು ಕಡೆ, ಕಾರಿಗನೂರದ ಮೂರು ಕಡೆಗಳಲ್ಲಿ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂದು ತಿಳಿದು ಬಂದಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ತಾಪಂ ಅಧಿಕಾರಿ ಆರ್.ಎಸ್. ಹಿರೇಗೌಡರ, ಖೂಭಾಸಿಂಗ ಜಾಧವ, ಗ್ರಾ.ಪಂ ವ್ಯಾಪ್ತಿಯಲ್ಲಿ ಫಾಗಿಂಗ್ ಕಾರ್ಯ ನಡೆಸಲಾಗುತ್ತಿದೆ. ಸ್ವಚ್ಛತೆ ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ವಿಕಲಚೇತನ ಒಕ್ಕೂಟದ ಎಸ್.ಕೆ.ಘಾಟಿ, ಪವಾಡೆಪ್ಪ ಕೊಡಗಾನೂರ ಮೊದಲಾದವರು ಸಭೆಯಲ್ಲಿ ಆಗಮಿಸಿ, ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚರಿಸುವ ವೇಗದೂತ ಬಸ್‌ಗಳಲ್ಲಿ ಅಂಗವಿಕಲರಿಗೆ ಪಾಸ್ ನಡೆಯುವುದಿಲ್ಲ ಎಂದು ಹೇಳಿ ಬಸ್‌ಗಳಲ್ಲಿ ಹತ್ತಿಸಿಕೊಳ್ಳುವುದಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ತಾಪಂ ಆಡಳಿತಾಧಿಕಾರಿ ಡಿ.ಡಬ್ಲು ರಾಜಶೇಖರ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಸಿಡಿಪಿಒ ಶಿವಮೂರ್ತಿ ಕುಂಬಾರ ಮಾತನಾಡಿ, ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಬಾಡಿಗೆ ಕಟ್ಟಡದಲ್ಲಿದ್ದು, ಸ್ವಂತ ಕಟ್ಟಡ ಒದಗಿಸಲು ನಿವೇಶನ ಒದಗಿಸುವಂತೆ ತಿಳಿಸಿದರು. ಈ ವರ್ಷದಿಂದಲೇ ಅಂಗನವಾಡಿಗಳಲ್ಲಿ ಎಲ್.ಕೆ.ಜಿ, ಯುಕೆಜಿ ನಡೆಸಲು ಸರ್ಕಾರ ಸೂಚಿಸಿದ್ದು ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ವಿದ್ಯಾರ್ಹತೆ ಆಧಾರದ ಮೇಲೆ ಪಿಯು, ಪದವಿ ಪಡೆದವರಿಗೆ ಆದ್ಯತೆ ನೀಡುವುದಾಗಿ ಸರ್ಕಾರ ತಿಳಿಸಿದೆ. ವೇತನವನ್ನೂ ಹೆಚ್ಚಿಸುವ ಮಾಹಿತಿ ಬಂದಿದ್ದು ಅಧಿಕೃತ ಸುತ್ತೋಲೆ ಬಂದಿಲ್ಲ ಎಂದು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಮಾತನಾಡಿ, ಈವರೆಗೆ ತಾಲ್ಲೂಕಿನಲ್ಲಿ 30.92 ಸೆಂ.ಮೀ ಮಳೆಯಾಗಿದ್ದು, ತೊಗರಿ 20,250, ಸಜ್ಜೆ 895, ಮುಸುಕಿನಜೋಳ 592 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ತೊಗರಿ 984.8 ಕ್ವಿಂಟಲ್, ಸಜ್ಜೆ 7.44 ಕ್ವಿಂಟಲ್, ಮುಸುಕಿನ ಜೋಳ 112.34 ಕ್ವಿಂಟಲ್, ಸೂರ್ಯಕಾಂತಿ 2.46 ಕ್ವಿಂಟಲ್, ಹೆಸರು 6.8 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದೆ ಎಂದು ತಿಳಿಸಿದರು.

ಬಿಇಒ ಬಿ.ಎಸ್.ಸಾವಳಗಿ ಮಾತನಾಡಿದರು. ಯೋಜನಾಧಿಕಾರಿ ಖೂಭಾಸಿಂಗ ಜಾಧವ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ, ಅಧಿಕಾರಿ ವೀರೇಶ ಹೂಗಾರ ಇಲಾಖೆಯ ಪ್ರಗತಿಯನ್ನು ಸಭೆಗೆ ವಿವರಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳಾದ ಉಮೇಶ ಮಾಟೂರ, ಶಿವಾನಂದ ಮೇಟಿ, ಉಮೇಶ ಲಮಾಣಿ, ವಿಜಯಕುಮಾರ ಉತ್ನಾಳ, ಸಂತೋಷ ದೇಶಪಾಂಡೆ, ಬಿ.ಎಸ್.ಯಲಗೋಡ, ಎಸ್.ಬಿ.ಹೊಲ್ದೂರ, ಎಸ್.ಬಿ.ಪತ್ತಾರ, ವಸಂತ ಪವಾರ, ಪ್ರಕಾಶ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.