ಸಿಂದಗಿ: ಪಟ್ಟಣದ 11ನೇ ವಾರ್ಡ್‌ನಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಬಂದಿಲ್ಲ. ಶೀಘ್ರ ನೀರು ಕೊಡಿ ಎಂದು ಆಗ್ರಹಿಸಿ ನಿವಾಸಿಗಳು ಪುರಸಭೆ ಕಾರ್ಯಾಯಲಕ್ಕೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಾರ್ಡ್ ನಿವಾಸಿ ಪ್ರತಿಭಾ ಚಳ್ಳಗಿ ಮಾತನಾಡಿ, ಪಟ್ಟಣದ 23 ವಾರ್ಡ್‌ಗಳಲ್ಲಿ 11ನೇ ವಾರ್ಡ್ ಸಂಪೂರ್ಣ ನಿರ್ಲಕ್ಷ್ಯಕೊಳ್ಳಗಾಗಿದೆ. 15 ದಿನಗಳಾದರೂ ಕುಡಿಯುವ ನೀರು ಬಂದಿಲ್ಲ, ರಸ್ತೆಗಳೂ ಹದಗೆಟ್ಟು ಹೋಗಿವೆ. ಚರಂಡಿ ತುಂಬಿಕೊಂಡರೂ ಸ್ವಚ್ಛಗೊಳಿಸುವುದಿಲ್ಲ. ಎಲ್ಲೆಲ್ಲೂ ಕಸದ ರಾಶಿ ಇದೆ. ಈ ಬಗ್ಗೆ ಮುಖ್ಯಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕುರ್ಚಿ ಮೇಲೆತ್ತಲು ಮುಂದಾದ ಮುಖ್ಯಾಧಿಕಾರಿ: ನಿವಾಸಿಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಭಾಭವನದಲ್ಲಿ ಸದಸ್ಯೆಯ ಪತಿ ಗಿರೀಶ ನಾಗೂರ ಮತ್ತು ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮಧ್ಯೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಲ್ಲದೇ ಮುಖ್ಯಾಧಿಕಾರಿ ಕೋಪದಲ್ಲಿ ಕುರ್ಚಿ ಮೇಲೆತ್ತಲು ಮುಂದಾದ ಪ್ರಸಂಗ ನಡೆಯಿತು.
‘ಪುರಸಭೆ ಸದಸ್ಯೆ ಪತಿ ಗಿರೀಶ ನಾಗೂರ 2021ರಿಂದ ಇಲ್ಲಿಯ ವರೆಗೆ ಪುರಸಭೆ ಮುಖ್ಯಾಧಿಕಾರಿಗೆ 11ನೇ ವಾರ್ಡ್ ಅಭಿವೃದ್ದಿ ಕಾಮಗಾರಿ ಕುರಿತಾಗಿ ಲಿಖಿತ ಪತ್ರ ಕೊಟ್ಟು ಮಾಹಿತಿ ನೀಡುವಂತೆ ಕೇಳಿಕೊಂಡರೂ ಯಾವುದಕ್ಕೂ ಉತ್ತರಿಸಿಲ್ಲ. ಈಗ ಮೂಲ ಸೌಲಭ್ಯಗಳ ಕುರಿತು ಪ್ರಶ್ನಿಸಿದರೆ ಉಡಾಫೆ ಉತ್ತರ ಕೊಡುವುದಲ್ಲದೇ ಸಭಾಭವನದಲ್ಲಿ ಕುರ್ಚಿ ಮೇಲೆತ್ತಲು ಮುಂದಾಗಿ ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ’ ಎಂದು ಪ್ರತಿಭಾ ಚಳ್ಳಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಾರ್ಡ್ ಸದಸ್ಯೆ ವಿಜಯಲಕ್ಷ್ಮೀ ನಾಗೂರ, ವಿದ್ಯಾ ಪತ್ತಾರ, ಶಾಂತಾಬಾಯಿ ಮಠಪತಿ, ಶಶಿಕಲಾ ಅವಟಿ, ದಾನಮ್ಮ ಬ್ಯಾಕೋಡ, ವಿದ್ಯಾಶ್ರೀ ಹಂಚಿನಾಳ, ಬಸಮ್ಮ ದಸ್ಮಾ, ರಾಜಶೇಖರ ಜೋಗೂರ, ಚನ್ನವೀರ ದಸ್ಮಾ, ಶಿವೂ ಬಂದೆ, ಮುತ್ತು ಮಠ, ಈರಣ್ಣ ಚಬನೂರ, ಮಂಜುನಾಥ ದಸ್ಮಾ, ವಿಜಯ ವಮ್ಮಾ ಪಾಲ್ಗೊಂಡಿದ್ದರು.
ನಂತರ ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.