ADVERTISEMENT

ಶಿಥಿಲಾವಸ್ಥೆಯಲ್ಲಿ ವಿಜಯಪುರ- ಕಲಬುರಗಿ ಸಂಪರ್ಕ ಕಲ್ಪಿಸುವ ದೇವಣಗಾಂವ ಸೇತುವೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 2:45 IST
Last Updated 21 ಜುಲೈ 2024, 2:45 IST
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ದೇವಣಗಾಂವ ಸೇತುವೆ ಹದಗೆಟ್ಟಿರುವುದು
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ದೇವಣಗಾಂವ ಸೇತುವೆ ಹದಗೆಟ್ಟಿರುವುದು   

ಆಲಮೇಲ: ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ದೇವಣಗಾಂವ ಸೇತುವೆ ಕುಸಿದು ಬೀಳುವ ಭೀತಿ ಎದುರಾಗಿದೆ.

ಕಳೆದ ಹಲವು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ಈ ಸೇತುವೆ ದುರಸ್ತಿಯಾಗದೆ ಮೇಲ್ಬಾಗದಲ್ಲಿ ಮಳೆನೀರು ನಿಂತು ಸೇತುವೆಯ ಕಂಬಗಳಲ್ಲಿ ನೀರು ಇಳಿಯುತ್ತಿದೆ. ಇದರಿಂದ ಕಂಬಗಳು ಶಿಥಿಲವಾಗುವ ಹಂತ ತಲುಪಿದೆ. ಹೀಗೆ ಮುಂದುವರಿದರೆ ಕಲ್ಲಿನ ಕಂಬಗಳಲ್ಲಿ ಒಂದೇ ಕಲ್ಲು ಸರಿದು ಹೋದರೂ ಹೆಚ್ಚು ಶಿಥಿಲವಾಗುತ್ತದೆ.

ಸೇತುವೆ ತುಂಬ ಹೊಂಡಗಳು ನಿರ್ಮಾಣವಾಗಿ ಸೇತುವೆ ಮೇಲ್ಭಾಗದಲ್ಲಿ ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮೊಳಕಾಲು ಉದ್ಧದ ಗುಂಡಿಗಳು ತುಂಬಿಕೊಂಡಿವೆ. ಸೇತುವೆಯ 2 ಭಾಗದ ತಡೆಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳು ಕೂಡ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ADVERTISEMENT

1960ರಲ್ಲಿ ಪ್ರಾರಂಭಗೊಂಡು 1963ರಲ್ಲಿ ಉದ್ಘಾಟನೆಗೊಂಡಿರುವ ಈ ಸೇತುವೆ ಜಿಲ್ಲೆಯ ಅತಿ ಹಳೆಯ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ. ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿರುವ ಕಂಬಗಳು ಇಂದಿಗೂ ಕೂಡ ಗಟ್ಟಿ ಮುಟ್ಟಾಗಿರುವುದು ನಿರ್ಮಾಣದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

‘2003 -04ರಲ್ಲಿ ಸೇತುವೆಯ ಕಂಬಗಳು ಇನ್ನೂ ಸುಸ್ಥಿತಿಯಲ್ಲಿ ಇದ್ದ ಕಾರಣ ಅಂದಿನ ಸರ್ಕಾರ ಮೇಲ್ಭಾಗದ ದುರಸ್ತಿಯನ್ನು ಕೈಗೊಂಡಿತ್ತು. ಆದರೆ ದುರಾದೃಷ್ಟವಶಾತ ದುರಸ್ತಿಗೊಂಡಿರುವ ಮೇಲ್ಭಾಗವೇ ದುರಸ್ತಿಗೆ ಬಂದಿದೆ. ಆದರೆ ಕೆಳಗಿನ ಕಂಬಗಳು ಇಂದಿಗೂ ಗಟ್ಟಿಮುಟ್ಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೇತುವೆಯ ಗುಣಮಟ್ಟವನ್ನು ಪರೀಕ್ಷಿಸಿ, ದುರಸ್ತಿ ಮಾಡಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದಿನಗಳ ಕಾಲ ಸೇತುವೆಯ ಉಪಯೋಗ ಜನರಿಗೆ ಸಿಗಬಹುದು’ ಎಂದು  ಪ್ರಕಾಶ ಗಂಗನಳ್ಳಿ ಹೇಳುತ್ತಾರೆ.

ಈ ಸೇತುವೆಯು ಕಳೆದ ಏಳು ದಶಕಗಳಿಂದ ಕಲಬುರಗಿ, ವಿಜಯಪುರ ಅಲ್ಲದೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ತುಳಜಾಪುರ, ಲಾತೂರ್, ಆಂಧ್ರಪ್ರದೇಶ, ತೆಲಂಗಾಣದ ಹೈದರಾಬಾದ್ ಸೇರಿದಂತೆ ಎಲ್ಲ ಪ್ರಮುಖ ನಗರಗಳಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸದ್ಯದ ಸ್ಥಿತಿ ನೋಡಿದರೆ ಸೇತುವೆಯ ಮೇಲ್ಭಾಗ ಬಹಳ ಹದಗೆಟ್ಟು ಹೋಗಿದೆ.ಕೂಡಲೇ ದುರಸ್ತಿ ಮಾಡಿದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರಾದ ಸಿದ್ದು ಗಂಗನಳ್ಳಿ, ದತ್ತಾತ್ರೇಯ ಸೊನ್ನ, ಶಿವು ಕಾಟಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.