ADVERTISEMENT

ಉಚಿತ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 18:39 IST
Last Updated 9 ಡಿಸೆಂಬರ್ 2023, 18:39 IST
ರಂಭಾಪುರಿ ಸ್ವಾಮೀಜಿ
ರಂಭಾಪುರಿ ಸ್ವಾಮೀಜಿ   

ಮುದ್ದೇಬಿಹಾಳ (ವಿಜಯಪುರ): ‘ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬಳವಾಟದಲ್ಲಿ ಶನಿವಾರ ನಡೆದ ಧಾರ್ಮಿಕ ಸಮಾರಂಭದ ಬಳಿಕ ಸುದ್ದಿಗಾರರ ಜೊತೆ  ಮಾತನಾಡಿದ ಅವರು, ‘ಧಾರ್ಮಿಕ ಕ್ಷೇತ್ರ ಅಲ್ಲದೇ ರಾಜ್ಯದ ಯಾವ ಅಭಿವೃದ್ಧಿ ಕೆಲಸಗಳಿಗೂ ಹಣ ಬಿಡುಗಡೆ ಆಗುತ್ತಿಲ್ಲ. ಅನುದಾನವೂ ಸಿಗುತ್ತಿಲ್ಲ ಎಂಬ ಬೇಸರ ಶಾಸಕರಲ್ಲಿದೆ’ ಎಂದರು.

‘ಉಚಿತ ಯೋಜನೆಗಳಿಗೆ ಮುಕ್ಕಾಲು ಭಾಗ ಹಣ ಖರ್ಚಾಗುವುದರಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ಯೋಜನೆಗಳ ಮೊರೆ ಹೋಗಿ ದುಡಿಯುವ ಜನರು ಕೂಡ ಸೋಮಾರಿಗಳಾಗಿದ್ದಾರೆ’ ಎಂದರು.

ADVERTISEMENT

‘ರೇಣುಕಾಚಾರ್ಯರು ಕಾಯಕವೇ ಕಳಾಚೈತನ್ಯ, ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದರು. ದುಡಿದು ಬದುಕುವ ಮನೋಪ್ರವೃತ್ತಿಯನ್ನು ಜನರಲ್ಲಿ ರಾಜಕಾರಣಿಗಳು ಬೆಳೆಸಬೇಕು’ ಎಂದರು.

‘ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆಯಾಗಬೇಕು. ಜಾತಿಯ ತುಷ್ಟೀಕರಣ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

‘ಎಂ.ಬಿ.ಪಾಟೀಲರಿಗೆ ಜಲಸಂಪನ್ಮೂಲ ಖಾತೆ ಸಿಗಬೇಕಿತ್ತು’

‘ಈ ಹಿಂದೆ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆ ಕೈಗೊಂಡು ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಗೆ ಶ್ರಮಿಸಿದ್ದರು. ಜಮೀನುಗಳಿಗೆ ನೀರು ಹರಿದಿತ್ತು. ಈ ಸಲವೂ ಎಂ.ಬಿ.ಪಾಟೀಲರಿಗೆ ಜಲಸಂಪನ್ಮೂಲ ಖಾತೆಗೆ ವಹಿಸಿದ್ದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದರು’ ಎಂದು ರಂಭಾಪುರಿ ಶ್ರೀ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.