ತಾಂಬಾ: ‘ದ್ರಾಕ್ಷಿ ಬೆಳಿ ಭಾಳ ಚೆನ್ನಾಗಿ ಬೆಳಿಸೀವ್ರಿ. ಬೆಳೆ ಸರಿಯಾಗಿ ಬರ್ತದ, ಈ ಸಲ ಆದ್ರೂ ನಮ್ಮ ಸಾಲ ತೀರ್ತದ ಅಂತ ನಿರೀಕ್ಷೆ ಇತ್ತರಿ. ಈಗ ದಾವಣಿ ರೋಗ ಬಂದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂಗ ಆಗೈತಿ. ಮುಂದ ಏನು ಮಡೂದು ತಿಳೀವಲ್ದು’ ಎಂದು ಬನ್ನಹಟ್ಟಿ ಗ್ರಾಮದ ರೈತ ಮಾಂತೇಶ ಚೆನ್ನಣ್ಣವರ ‘ಪ್ರಜಾವಾಣಿ’ ಪ್ರತಿನಿಧಿ ಎದುರು ಅಳಲು ತೋಡಿಕೊಂಡರು.
‘ಏಕಾಏಕಿ ದಾವಣಿ ರೋಗ ಬಂದಿದ್ದರಿಂದ 4 ರಿಂದ 5 ಎಕರೆ ಬೆಳೆ ಹಾಳಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು’ ಎಂದು ಬನ್ನಹಟ್ಟಿ ಗ್ರಾಮದ ದ್ರಾಕ್ಷಿ ಬೆಳೆಗಾರ ವೆಂಕಟರಾವ ಪಾಟೀಲ ಆಗ್ರಹಿಸಿದ್ದಾರೆ.
2023-24 ರಲ್ಲಿ ಭೀಕರ ಬರ, ಹವಾಮಾನ ವೈಪರೀತ್ಯದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ದ್ರಾಕ್ಷಿ ಫಸಲು ಬರಲಿಲ್ಲ. ನಷ್ಟ ಆನುಭವಿಸಿದ ರೈತನಿಗೆ ಬೆಳೆವಿಮೆ ಕೂಡ ಸರಿಯಾಗಿ ಸಿಗಲಿಲ್ಲ, ಪ್ರಸಕ್ತ ವರ್ಷ ರೈತರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಚಾಟಣಿ (ಫಸಲು ಬಿಡಲು ಕುಡಿ ಕತ್ತರಿಸುವುದು) ಕೂಡ ಮಾಡಿದ್ದರು. ಸದ್ಯ ಹೂವು ಗೊನೆ ಕಟ್ಟುತ್ತಿದೆ. ಆದರೆ ಕಳೆದೊಂದು ವಾರದಿಂದ ಬಿಸಿಲು ಮಾಯವಾಗಿ ಮಳೆ, ಮೋಡ ಮತ್ತು ಇಬ್ಬನಿಯಿಂದಾಗಿ ದ್ರಾಕ್ಷಿ ಬೆಳೆಯ ಹೂವು ಗೊನೆ ಕರಗಿ ಉದುರುತ್ತಿವೆ.
ತಾಂಬಾ, ಬನಹಟ್ಟಿ, ಗೂರನಾಳ, ಹಿರೇಮಸಳಿ, ಹಿರೇರೂಗಿ, ಬೆನಕನಹಳ್ಳಿ, ಚಿಕ್ಕರೂಗಿ, ಗಂಗನಹಳ್ಳಿ, ಕೆಂಗನಾಳ, ಶಿರಕನಹಳ್ಳಿ, ಹೊನ್ನಳ್ಳಿ, ಹಿಟ್ನಳ್ಳಿ, ಕಡ್ಲೆವಾಡ, ಸುರಗಿಹಳ್ಳಿ, ಬಂಥನಾಳ, ಬಳಗಾನೂರ, ಚಾಂದಕೋಟಿ ಗ್ರಾಮಗಳಲ್ಲಿ ದ್ರಾಕ್ಷಿ ಬೆಳಿಗೆ ದಾವಣಿ ರೋಗ ಕಾಣಿಸಿದ್ದರಿಂದ ರೈತರು ಅತಂಕದಲ್ಲಿ ಇದ್ದಾರೆ.
ದ್ರಾಕ್ಷಿಗೆ ದಾವಣಿ ರೋಗ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂಗ ಆಗೈತಿ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕೊಡಿಸಬೇಕುಮಾಂತೇಶ ಚೆನ್ನಣ್ಣವರ ದ್ರಾಕ್ಷಿ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.